ಬಾಗಲಕೋಟೆ: ಐತಿಹಾಸಿಕ ಕೇಂದ್ರ ಹಾಗೂ ಶಕ್ತಿ ಪೀಠಗಳಲ್ಲಿ ಒಂದಾದ ಬನಶಂಕರಿ ದೇವಾಲಯ ಜಾತ್ರೆ ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧ ಪಡೆದುಕೊಂಡಿದೆ. ಜೊತೆಗೆ ಬನಶಂಕರಿ ದೇವಿಯ ಜಾತ್ರೆ ಮನರಂಜನೆ ನೀಡುವ ಪ್ರಮುಖ ಜಾತ್ರೆಯಾಗಿ ಗಮನ ಸೆಳೆಯುವಂತಾಗಿದೆ. ಈ ಜಾತ್ರೆಗೆ ಉತ್ತರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಹಾಗೂ ಗೋವಾ ಸೇರಿ ರಾಜ್ಯದ ವಿವಿಧ ಪ್ರದೇಶಗಳಿಂದ ಭಕ್ತರು ಹಾಗೂ ಪ್ರವಾಸಿಗರು ಬರುತ್ತಾರೆ. ಭಕ್ತರು ದೇವಿಯ ದರ್ಶನ ಬಳಿಕ ಭಕ್ತರಿಗೆ ಇಲ್ಲಿ ನಾಟಕ ಕಂಪನಿಗಳೇ ಪ್ರಮುಖ ಆಕರ್ಷಣೆ ಕೇಂದ್ರವಾಗಿವೆ.
ಜಾತ್ರೆಯಲ್ಲಿ ನಾಟಕ ಪ್ರಮುಖ ಆರ್ಕಷಣೆ : ಸುಮಾರು 9 ನಾಟಕ ಕಂಪನಿಗಳಿಂದ ಈ ಬಾರಿ ನಾಟಕ ಪ್ರದರ್ಶನಕ್ಕೆ ಆಗುತ್ತಿದ್ದು, ಪ್ರೇಕ್ಷಕರನ್ನು ಸೆಳೆಯುತ್ತಿವೆ. ಗುಳ್ಳವನ ಗುಗ್ಗರಿ ಎಂದು ಜ್ಯೋತಿ ಗುಳೇದಗುಡ್ಡ ಕಂಪನಿಯು ಹಾಸ್ಯ ಭರಿತವಾಗಿ ಪೇಕ್ಷಕರನ್ನು ರಂಜಿಸುತ್ತಿದೆ. ಡಬಲ್ ಮಿನಿಂಗ್ ಇಲ್ಲದೆ ಸರಳವಾದ ಉತ್ತರ ಕರ್ನಾಟಕ ಭಾಷೆಯಲ್ಲಿ ಹಾಸ್ಯ ಹಾಗೂ ಹಾಡು ಸಂಗೀತ, ಡ್ಯಾನ್ಸ್ ಮಾಡುತ್ತಿರುವ ನಾಟಕ ಪ್ರೀಯರಿಗೆ ರಸದೌತಣ ಬಡಿಸುವಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಮಾಹಿತಿ ತಂತ್ರಜ್ಞಾನ ಯುಗದಿಂದ ನಾಟಕ ಕಂಪನಿಗಳು ನಶಿಸಿ ಹೋಗುತ್ತಿದ್ದವು. ಆದರೆ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ನಾಟಕ ಕಂಪನಿಗಳಿಗೆ ಹೆಚ್ಚು ಬೇಡಿಕೆ ಇದೆ. ಕಳೆದ ಹತ್ತು ವರ್ಷಗಳ ಹಿಂದೆ ಈ ಜಾತ್ರೆಯಲ್ಲಿ ನಾಟಕ ಕಂಪನಿಗಳಿಗೆ ಹೆಚ್ಚು ಬೇಡಿಕೆ ಇದ್ದಿಲ್ಲ. ಆಗ ನೂತನವಾಗಿ ಬಿಡುಗಡೆ ಆಗಲಿರುವ ಚಿತ್ರಗಳ ಬಗ್ಗೆ ಭಾರಿ ಬೇಡಿಕೆ ಇತ್ತು.
ಶಿವರಾಜಕುಮಾರ್, ರವಿಚಂದ್ರನ್, ಅಪ್ಪು, ರಾಜಕುಮಾರ್, ಅಂಬರೀಷ್, ವಿಷ್ಣುವರ್ಧನ್ ಸೇರಿದಂತೆ ಇತರ ಖ್ಯಾತ ನಟರ ಹೊಸ ಚಲನಚಿತ್ರ ಬಿಡುಗಡೆ ಆಗುತ್ತಿದ್ದವು, ಆದರೆ ಈಗ ಮೊಬೈಲ್ನಲ್ಲಿಯೇ ಚಲನಚಿತ್ರ ವೀಕ್ಷಣೆ ಮಾಡುತ್ತಿರುವ ಹಿನ್ನೆಲೆ ನಾಟಕ ಕಂಪನಿಗಳಿಗೆ ಈಗ ಹೆಚ್ಚು ಬೇಡಿಕೆ ಬಂದಿದೆ.
ಆಧುನಿಕ ಕಾಲದಲ್ಲಿ ಏನಿದ್ದರೂ ಲೈವ್ ನೋಡಲು ಹೆಚ್ಚು ಜನರು ಇಷ್ಟಪಡುತ್ತಾರೆ. ಹೀಗಾಗಿ ನಾಟಕ ಕಂಪನಿಗಳು ಲೈವ್ಯಾಗಿ ಆಭಿನಯಿಸುವುದರಿಂದ ಜನರಿಗೆ ನಾಟಕ ನೋಡುವುದೇ ಪ್ರಮುಖವಾಗಿದೆ. ಬನಶಂಕರಿ ಜಾತ್ರೆಯಲ್ಲಿ ನಾಟಕ ಕಂಪನಿಗಳು ಪ್ರಾರಂಭವಾಗುವುದೇ ಸಂಜೆ ಸಮಯದಲ್ಲಿ. ಸಂಜೆಯಿಂದ ಬೆಳಗಿನ ಜಾವದವರೆಗೂ ನಾಟಕ ಪ್ರದರ್ಶನವಾಗುತ್ತದೆ.
ಜಾತ್ರೆಯ ಸಮಯದಲ್ಲಿ ಪ್ರತಿದಿನ ಸಂಜೆ 6-30, ರಾತ್ರಿ 9-30, ಮಧ್ಯರಾತ್ರಿ 1-30 ಹೀಗೆ ಮೂರು ಆಟಗಳು ನಾಟಕ ಪ್ರದರ್ಶನವಾಗುತ್ತದೆ. ಸಂಜೆ ಬಂದ ಭಕ್ತರು ದೇವಿಯ ದರ್ಶನ ಪಡೆದುಕೊಂಡ ನಂತರ ರಾತ್ರಿ ಇಡೀ ಮೂರು ನಾಟಕ ನೋಡಿಕೊಂಡು ಬೆಳಗಿನ ಜಾವ ಊರಿಗೆ ವಾಪಸ್ ಹೋಗುತ್ತಾರೆ. ಮಕರ ಸಂಕ್ರಾಂತಿ ರಜೆ ಹಾಗೂ ವೀಕ್ ಎಂಡ್ ಹಿನ್ನೆಲೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಬಂದ ಭಕ್ತರು ನಾಟಕ ನೋಡಿಕೊಂಡು ಹೋಗುತ್ತಾರೆ.
ಒಂಬತ್ತು ನಾಟಕ ಕಂಪನಿಗಳು ಪೇಕ್ಷಕರಿಂದ ತುಂಬಿದ್ದು, ಕಲಾವಿದರಿಗೆ ಸಂತಸ ಉಂಟಾಗಿದೆ. ಅಲ್ಲದೆ ಯಾವ ನಾಟಕ ಕಂಪನಿ ಹೆಚ್ಚು ಹಾಸ್ಯ ಹಾಗೂ ಒಳ್ಳೆಯ ಸಂದೇಶ ನೀಡುತ್ತಾರೆಯೋ ಅಂತಹ ನಾಟಕ ಕಂಪನಿಗಳು ಹೆಚ್ಚು ಭರ್ತಿಯಾಗಿ ಲಾಭಗಳಿಸುತ್ತಿವೆ. ಈ ಮಧ್ಯೆ ಕಿರುತೆರೆ ನಟ ನಟಿಯರನ್ನು ಹಾಗೂ ಕಾಮಿಡಿ ಶೋ ಮಾಡುವಂತಹ ನಟಿಯರನ್ನು ಕರೆಯಿಸಿ, ಪೇಕ್ಷಕರನ್ನು ಆಕರ್ಷಣೆ ಮಾಡುತ್ತಿದ್ದಾರೆ.
ಬನಶಂಕರಿ ಜಾತ್ರೆ ಅಂದರೆ ನಾಟಕ ಕಂಪನಿಗಳ ಜಾತ್ರೆ ಎಂದು ಪ್ರಖ್ಯಾತ ಪಡೆಯುತ್ತಿದೆ. ಡಬಲ್ ಮಿನಿಂಗ್ ಭಾಷೆ ಇಲ್ಲದೆ ಸರಳ ಹಾಗೂ ಹೆಚ್ಚು ಕಾಮಿಡಿ ಇರುವ ನಾಟಕಕ್ಕೆ ಹೆಚ್ಚು ಕಲೆಕ್ಷನ್ ಆಗುತ್ತಿದೆ. ಈ ಬಗ್ಗೆ ಕಲಾವಿದೆ ಜ್ಯೋತಿ ಗುಳೇದಗುಡ್ಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಈ ಭಾರಿ ಪೇಕ್ಷಕರ ಸಂಖ್ಯೆ ಹೆಚ್ಚಾಗಿದ್ದು, ಲಾಭ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕೊಪ್ಪಳ ಜಾತ್ರೆಯಲ್ಲಿ ಗಮನಸೆಳೆದ ಪಾರಂಪರಿಕ ಕೃಷಿ ಪರಿಕರಗಳ ಪ್ರದರ್ಶನ