ಬಾಗಲಕೋಟೆ: ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರಿಗಾಗಿ ನಿರ್ಮಾಣ ಮಾಡಿರುವ ವಸತಿ ನಿಲಯಗಳು ಹಾಳಾಗಿ ಪಾಳು ಬಿದ್ದಿವೆ.
ಜಮಖಂಡಿ ತಾಲೂಕಿನ ದೊಡ್ಡ ಊರು, ಹೋಬಳಿ ಕೇಂದ್ರ ಸಾವಳಗಿ. ಇಲ್ಲಿ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಸರ್ಕಾರಿ ಆರೋಗ್ಯ ಕೇಂದ್ರವಿದೆ . ಹಳೆಯ ಚಿಕ್ಕ ಕಟ್ಟಡದ ಜೊತೆಗೆ ಈಗ ಸುಮಾರು 30 ಹಾಸಿಗೆಯ ಕಟ್ಟಡ ಪೂರ್ಣಗೊಂಡು ಉದ್ಘಾಟನೆಗೆ ಸಿದ್ದವಾಗಿದೆ. ಇಲ್ಲಿ ರೋಗಿಗಳಿಗೆ ಚಿಕಿತ್ಸೆ ಪಡೆಯಲು, ಹೆರಿಗೆ ಕೋಣೆ, ಔಷಧಾಲಯ ವ್ಯವಸ್ಥೆಗಳಿವೆ. ಆದರೆ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಸಿಬ್ಬಂದಿಗೆ ವಸತಿಗೃಹಗಳು ಇಲ್ಲವಾಗಿವೆ.
ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಿದ್ದ ಕಟ್ಟಡಗಳು ನೆಲಸಮವಾಗಿ ದಶಕವೇ ಕಳೆದಿದೆ. ಇಲ್ಲಿನ ಎರಡು ಕಟ್ಟಡಗಳಂತೂ ಅಪಾಯದ ಅಂಚಿನಲ್ಲಿವೆ. ಇಷ್ಟು ದಿನ ಇಲ್ಲಿ ಹಿರಿಯ ವೈದ್ಯಾಧಿಕಾರಿಗಳ ಕೊರತೆಯಿತ್ತು. ಈಗ ವೈದ್ಯಾದಿಕಾರಿಗಳು ಬಂದಿದ್ದಾರೆ.. ಸಾವಳಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಏನಾದರೂ ಅವಘಡಗಳಾಗಿ ಮೃತರಾದರೇ ಮರಣೋತ್ತರ ಪರೀಕ್ಷೆ ಅನಿವಾರ್ಯ. ಇಲ್ಲಿ ಶವ ಪರೀಕ್ಷಾ ಕೇಂದ್ರವಿದೆ. ಆದರೆ ಶವ ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸೌಲಭ್ಯಗಳಿಲ್ಲ.. ವಿದ್ಯುತ್ ಸಂಪರ್ಕವಿಲ್ಲ, ತರಬೇತಿ ಪಡೆದ ಸಹಾಯಕ ಸಿಬ್ಬಂದಿಯಿಲ್ಲ ಹೀಗಾಗಿ ತಾಲೂಕು ಕೇಂದ್ರವಾದ ಜಮಖಂಡಿಯನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದರಿಂದ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬರುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಕೆಲ ವಸತಿ ಕಟ್ಟಡಗಳಂತೂ ಮುಳ್ಳು ಕಂಟಿಯಿಂದ ತುಂಬಿ ಹೋಗಿದ್ದು, ಅನೈತಿಕ ಚಟುವಟಿಕೆಯ ತಾಣವಾಗುತ್ತಿದೆ. ಆರೋಗ್ಯ ಸುಧಾರಿಸಿದ ಬೇಕಾದ ಆರೋಗ್ಯ ಇಲಾಖೆಯ ಕಟ್ಟಡಗಳಿಗೆ ಅನಾರೋಗ್ಯ ಉಂಟಾಗಿದ್ದು,ಇಲಾಖೆಯಿಂದ ಸರ್ಜರಿ ಮಾಡಿ, ಉಪಯೋಗ ಆಗುವಂತೆ ಮಾಡುವುದು ಅಗತ್ಯವಿದೆ.