ಬಾಗಲಕೋಟೆ: ಈರುಳ್ಳಿ ಬೆಲೆ ಗಗನಕ್ಕೇರಿದ ಹಿನ್ನೆಲೆ ಅವಳಿ ಜಿಲ್ಲೆಯಲ್ಲಿ ಈರುಳ್ಳಿ ನಾಟಿ ಮಾಡಲು ಅನೇಕ ರೈತರು ಹೆಚ್ಚಿನ ಪ್ರಮಾಣದಲ್ಲಿ ಮುಂದಾಗುತ್ತಿದ್ದಾರೆ.
ಈಗ ಬೇಸಿಗೆ ಹಂಗಾಮಿನ ಈರುಳ್ಳಿ ನಾಟಿಮಾಡುವ ಸಮಯವಾದ್ದರಿಂದ ಅತಿ ಹೆಚ್ಚಿನ ಪ್ರಮಾಣದ ರೈತರು ಈ ಬೆಳೆ ಬೆಳೆಯಲು ಮುಂದಾಗಿರುವುದರಿಂದ ಕೂಲಿ ಕಾರ್ಮಿಕರು ಸರಿಯಾದ ಸಮಯಕ್ಕೆ ಸಿಗದಂತಾಗಿದ್ದಾರೆ.
ಕಳೆದ ಒಂದು ತಿಂಗಳಿಂದ ಈರುಳ್ಳಿ ದರವೇನು ತೀರ ಪಾತಾಳಕ್ಕೇನು ಹೋಗಿಲ್ಲ, ಮುಂದಿನ ದಿನಗಳಲ್ಲಿಯೂ ಕೂಡಾ ಈ ದರದಲ್ಲಿ ಭಾರಿ ಪ್ರಮಾಣದಲ್ಲೇನು ಇಳಿಕೆಯಾಗಲಿಕ್ಕಿಲ್ಲ ಎಂಬ ಅಪಾರ ನಂಬಿಕೆಯಿಂದ ಸಾವಿರಾರು ರೈತರು ಈರುಳ್ಳಿ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ.
ಕಳೆದ ವರ್ಷ ಈರುಳ್ಳಿ ನಾಟಿ ಮಾಡುವಾಗ ದಿನಕ್ಕೆ ಕೇವಲ 200 ರೂ. ಕೂಲಿ ಪಡೆಯುತ್ತಿದ್ದೆವು. ಆದರೆ, ಈಗ ಪ್ರತಿ ಗಂಟೆಗೆ ₹50 ನಂತೆ ಕೂಲಿ ಪಡೆಯುತ್ತಿದ್ದೇವೆ. 8 ಗಂಟೆಗೆ ನಮಗೆ ರೂ.400 ಸಂಬಳ ದೊರಕುತ್ತಿದೆ. ಗ್ರಾಮೀಣ ಭಾಗದಲ್ಲಿ 6 ಗಂಟೆ ಮಾತ್ರ ವಿದ್ಯುತ್ ಇರುವುದರಿಂದ ಉಳಿದ ಸಮಯವನ್ನು ಹೊಂಡದ ನೀರು ಬಳಸುವ ರೈತರ ತೋಟಗಳಿಗೆ ಹೋಗಿ ದುಡಿಯುತ್ತಿದ್ದೇವೆ ಎನ್ನುತ್ತಾರೆ ಬಾಯವ್ವ.