ಬಾಗಲಕೋಟೆ: ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಮಾಡಿರುವುದನ್ನು ಬಾಗಲಕೋಟೆ ಜಿಲ್ಲೆಯ ರೈತರು ಖಂಡಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಸುಮಾರು ಹತ್ತು ಸಾವಿರ ಹೆಕ್ಟರ್ಗೂ ಅಧಿಕ ಈರುಳ್ಳಿ ಬೆಳೆ ಬೆಳೆದಿದ್ದು, ಸೂಕ್ತ ಬೆಲೆ ಇಲ್ಲದೆ ರೈತರು ಮೊದಲೇ ಕಂಗಾಲಾಗಿದ್ದಾರೆ, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈರುಳ್ಳಿ ರಪ್ತು ನಿಷೇಧ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ಕೊರೊನಾ ಭೀತಿಯಿಂದಾಗಿ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೆ ಈರುಳ್ಳೆ ಬೆಳೆ ಬೆಳೆದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಕಳೆದ ವರ್ಷ ಅಂದರೆ 2019 ಡಿಸೆಂಬರ್ನಲ್ಲಿ ಈರುಳ್ಳಿ ಕೆಜಿಗೆ 80 ರಿಂದ 100 ರೂಪಾಯಿವರೆಗೆ ಏರಿಕೆ ಆಗಿತ್ತು. ಕ್ವೀಂಟಲ್ಗೆ ಐದು ಸಾವಿರ ರೂಪಾಯಿಗಳವರೆ ದರ ನಿಗದಿ ಆಗಿತ್ತು. ಆಗ ಈರುಳ್ಳೆ ಬೆಳೆಯು ದೇಶದ ವಿವಿಧ ಪ್ರದೇಶಗಳಲ್ಲಿ ಸೇರಿದಂತೆ ಮಹಾರಾಷ್ಟ್ರ ಹಾಗೂ ಮಂಗಳೂರಿನಿಂದ ವಿದೇಶಕ್ಕೆ ರಪ್ತು ಮಾಡಲಾಗುತ್ತಿತ್ತು. ಕೊರೊನಾ ನಂತರ ಈರುಳ್ಳೆ ಬೆಲೆ ಪಾತಾಳಕ್ಕೆ ಇಳಿದಿದೆ. ಈಗ ಕೆಜಿಗೆ 10 ರೂಪಾಯಿಗಳ ಮಾತ್ರ ಇದ್ದು, ಕ್ವೀಂಟಲ್ 500 ರಿಂದ 800 ರೂಪಾಯಿಗಳ ಮಾತ್ರ ಇದೆ ಎಂದರು.
ಒಂದೆಡೆ ಕೊರೊನಾ ದಿಂದ ಸೂಕ್ತ ದರ ಸಿಗದೆ ತತ್ತರಗೊಂಡಿರುವ ರೈತರಿಗೆ ನಂತರ ಮಳೆ ಹಾಗೂ ಪ್ರವಾಹ ದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಮುಧೋಳ ತಾಲೂಕಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿಗೆ ಮಳೆಯಿಂದಾಗಿ ಹಾಳಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಈರುಳ್ಳಿ ಬೆಳೆದ ರೈತರಿಗೆ ಕೇಂದ್ರ ಸರ್ಕಾರವೇ ಬರೆ ಎಳೆದಂತಾಗಿದೆ. ಈ ಕೂಡಲೇ ರಪ್ತು ನಿಷೇಧ ಮಾಡಿರುವ ಕ್ರಮವನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯದಿದ್ದಲ್ಲಿ ಹೋರಾಟ ಮಾಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.