ಬಾಗಲಕೋಟೆ : ಕಾಟನ್ ಸೀರೆಗಳಿಗೆ ಮುಖ್ಯ ಮಾರುಕಟ್ಟೆಯಾಗಿದ್ದ ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ನೇಕಾರರ ಬದುಕಿನ ಮೇಲೆ ಬರೆ ಎಳೆದಂತಾಗಿದೆ.
ಜಿಲ್ಲೆಯ ನೇಕಾರರು ಉತ್ಪಾದನೆ ಮಾಡುವ ಸೀರೆಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಒಂದೊಂತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ಮಧ್ಯೆ ಸರ್ಕಾರ ನೇಕಾರರಿಗೆ ಒಂದು ಮಗ್ಗ, ಎರಡು ಸಾವಿರ ರೂ. ಲಾಕ್‌ಡೌನ್ ಪರಿಹಾರ ನೀಡಿದ್ದರೂ ಅದೂ ಇನ್ನೂ ಬಂದಿಲ್ಲ. ಇದರಿಂದ ನೇಕಾರರು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ.
ಈ ಮುಂಚೆ ಪ್ರತಿ ವಾರ 2 ಸಾವಿರ ರೂ.ವರೆಗೆ ಆದಾಯ ಬರುತ್ತಿತ್ತು. ಲಾಕ್‌ಡೌನ್ ಬಳಿಕ ಮಾರುಕಟ್ಟೆ ಸ್ಥಗಿತಗೊಂಡ ಪರಿಣಾಮ ಈಗ ವಾರಕ್ಕೆ ಕೇವಲ 500 ರೂ. ಮಾತ್ರ ಆದಾಯ ಸಿಗುತ್ತಿದೆ. ಇದರಿಂದ ಜೀವನ ಸಾಗಿಸುವುದು ಕಷ್ಟವಾಗಿದೆ. ಜಿಲ್ಲೆಯ ರಬಕವಿ-ಬನಹಟ್ಟಿ, ಮಹಾಲಿಂಗಪುರ, ಕಮತಗಿ, ಇಲಕಲ್ಲ, ಗುಳೇದಗುಡ್ಡ ಪಟ್ಟಣ ಸೇರಿ ವಿವಿಧ ಪ್ರದೇಶದಲ್ಲಿ ನೇಕಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರು ತಮ್ಮ ಮಾಲೀಕರ ಹತ್ತಿರ ಕಚ್ಚಾಸಾಮಗ್ರಿಗಳನ್ನ ತೆಗೆದುಕೊಂಡು ಸೀರೆ ತಯಾರಿಸಿ ಕೂಡುತ್ತಾರೆ.
ಕಾಟನ್ ಸೀರೆಗೆ ಪ್ರಮುಖ ಮಾರುಕಟ್ಟೆ ಅಂದ್ರೆ ಮಹಾರಾಷ್ಟ್ರ. ಅಲ್ಲಿನ ಸಾಂಪ್ರದಾಯಿಕ ತೊಡುಗೆ ಆಗಿರುವುದರಿಂದ ಸಾಕಷ್ಟು ಬೇಡಿಕೆ ಇದೆ. ಆದರೆ, ಈಗ ಕೋವಿಡ್‌ನಿಂದಾಗಿ ಮಾರುಕಟ್ಟೆ ಇಲ್ಲದೆ, ಮಾಲೀಕರು ಸೀರೆಗಳನ್ನು ಸಂಗ್ರಹಿಸಿ ಇಡುತ್ತಿದ್ದಾರೆ. ಇದರಿಂದ ನೇಕಾರಿಕೆ ಉದ್ಯೋಗಕ್ಕೆ ತೊಂದರೆ ಆಗುತ್ತಿದೆ.