ಬಾಗಲಕೋಟೆ: ಐತಿಹಾಸಿಕ ಕೇಂದ್ರ, ಧಾರ್ಮಿಕ ಶಕ್ತಿ ಕೇಂದ್ರವಾಗಿರುವ ಬಾದಾಮಿ ಬನಶಂಕರಿ ದೇವಿಯು ಇಂದು ಅವತಾರ ತಾಳಿದ ದಿನವಾದ್ದರಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಲಾಕ್ಡೌನ್ ನಡುವೆಯೂ ದೇವಾಲಯ ಮುಚ್ಚಿದ್ದರೂ ಸಹ ಅರ್ಚಕರು ಸೇರಿ ವಿಶೇಷ ಪೂಜೆ ನೆರವೇರಿಸಿದರು. ಈ ಬಾರಿ ಭಕ್ತರಿಲ್ಲದೆ ದೇವಿಗೆ ಮಾವಿನ ಹಣ್ಣು, ಬಾಳೆ ಹಣ್ಣು, ಎಳೆ ನೀರು, ಹಾಲು, ತುಪ್ಪ, ಜೇನಿನಿಂದ ಪೂಜೆ ಸಲ್ಲಿಸಿದರು. ಅರ್ಚಕರು ವಿವಿಧ ಅಭಿಷೇಕಗಳನ್ನು ನೆರವೇರಿಸಿ ಮಾವಿನ ಹಣ್ಣುಗಳಿಂದ ವಿಶೇಷ ಪೂಜೆ ಮಾಡಿದರು. ಬಾದಾಮಿ ಅಮವಾಸೆ ಮುನ್ನ ದಿನ ಬನಶಂಕರಿ ದೇವಿಯು ಅವತಾರ ತಾಳಿ, ರಾಕ್ಷಸರನ್ನು ಸಂಹಾರ ಮಾಡಿದಳು ಎಂಬ ಪ್ರತೀತಿ ಇದೆ.
ಇದೇ ದಿನದಂದು ದೇವಿಯ ಬಾದಾಮಿ ಚತುರ್ದಸಿ ಎಂದು ಅಥವಾ ಅವತಾರ ತಾಳಿದ ದಿನವೆಂದು ಪ್ರತಿ ವರ್ಷ ವಿಶೇಷ ಪೂಜೆ, ಪುನಸ್ಕಾರ ಮಾಡುತ್ತಾ ಬಂದಿದ್ದಾರೆ. ಇಂತಹ ಸಮಯದಲ್ಲಿ ಬಂದಿರುವ ಸಾವಿರಾರು ಭಕ್ತರಿಗೆ ಮಾವಿನಹಣ್ಣು ಶೀಕರಣೆ ಹೂಳಿಗೆ ಊಟ ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಸರಳವಾಗಿ ಆಚರಣೆಯನ್ನು ಮಾಡುವಂತಾಗಿದೆ.