ಬಾಗಲಕೋಟೆ: ಕೆಲಸ ಹುಡುಕಿಗೊಂಡು ಗೋವಾಕ್ಕೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದ ಹಂಸನೂರು, ತೆಗ್ಗಿ, ಲಿಂಗಾಪೂರ ಹಾಗೂ ಕೆಲವಡಿ ಸೇರಿದಂತೆ ಇತರ ಗ್ರಾಮಗಳ ಕೂಲಿ ಕಾರ್ಮಿಕರಿಗೆ ಸಿದ್ದರಾಮಯ್ಯನವರ ಬೆಂಬಲಿಗರಿಂದ ಗೋವಾಕ್ಕೆ ಆಹಾರ ಪದಾರ್ಥಗಳ ಕಿಟ್ ಕಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ಸಿದ್ದರಾಮಯ್ಯನವರ ಸೂಚನೆ ಮೇರೆಗೆ ‘ಅಭಿಮಾನಿ ಬಳಗದಿಂದ ಗೋವಾದಲ್ಲಿರುವ ಒಂದು ಸಾವಿರ ಕುಟುಂಬಕ್ಕೆ ಆಹಾರ ಪದಾರ್ಥಗಳನ್ನು ಗೋವಾಗೆ ತೆಗೆದುಕೊಂಡು ಹೋಗಿ ವಿತರಣೆ ಮಾಡಲಾಗುತ್ತದೆ. ಗೋವಾಗೆ ಕಳಿಸುವ ಆಹಾರ ಪದಾರ್ಥಗಳಲ್ಲಿ ಎರಡು ಕೆ.ಜಿ ಗೋಧಿ ಹಿಟ್ಟು, ಎರಡು ಕೆ.ಜಿ ಜೋಳ, ಒಂದು ಕೆ.ಜಿ ಬೇಳೆ, ಒಂದು ಕೆ.ಜಿ ಎಣ್ಣೆ, ಒಂದು ಕೆ.ಜಿ ಸಕ್ಕರೆ, ಒಂದು ಕೆ.ಜಿ ರವೆ, ಒಂದು ಕೆಜಿ. ಅಕ್ಕಿ, ಅರ್ಧ ಕೆ.ಜಿ ಹುರುಳಿಕಾಳು, ಎರಡು ಕೆ.ಜಿ ಈರುಳ್ಳಿ, ಎರಡು ಕೆ.ಜಿ ಹಸಿಮೆಣಸಿನಕಾಯಿ, ಎರಡು ಸಾಬೂನು, ಒಟ್ಟು ಹನ್ನೊಂದು ಪದಾರ್ಥಗಳ ಆಹಾರ ಪದಾರ್ಥಳಗ ಕಿಟ್ಅನ್ನು ಬಾದಾಮಿ ನಗರದಲ್ಲಿ ಪ್ಯಾಕ್ ಮಾಡಲಾಯಿತು.
ಇನ್ನು ಸಿದ್ದರಾಮಯ್ಯನವರ ಆಪ್ತರಾದ ಹೊಳೆಬಸು ಶೆಟ್ಟಿ ನೇತೃತ್ವದಲ್ಲಿ ಕಿಟ್ ಪ್ಯಾಕಿಂಗ್ ನಡೆಯುತ್ತಿದ್ದು, ಎರಡು ದಿನದಲ್ಲಿ ಗೋವಾಕ್ಕೆ ತೆರಳಿ ಕಿಟ್ ವಿತರಣೆ ಮಾಡಲಾಗುವುದು. ಈ ಮೂಲಕ ಬಾದಾಮಿ ಮತ ಕ್ಷೇತ್ರದ ಜನತೆಗೆ ಗೋವಾದಲ್ಲಿ ಆಹಾರ ಧಾನ್ಯದ ಕೊರತೆ ಆಗದಂತೆ ಸಿದ್ದರಾಮಯ್ಯನವರು ಸೂಚನೆ ನೀಡಿದ್ದಾರೆ ಎಂದು ಆಪ್ತರಾದ ಹೊಳೆಬಸು ಶೆಟ್ಟಿ ತಿಳಿಸಿದ್ದಾರೆ.