ಬಾಗಲಕೋಟೆ: ಕೃಷ್ಣಾ ನದಿಯ ಪ್ರವಾಹದಿಂದಾಗಿ ರಬಕವಿಯ ಹೆಸ್ಕಾಂ ವಿಭಾಗಕ್ಕೆ ಅಪಾರ ಪ್ರಮಾಣದ ಹಾನಿಯಾಗಿದೆ. ನದಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿದ್ದು ಹೋಗಿರುವ ಕಂಬಗಳನ್ನು ಮತ್ತು ವಿದ್ಯುತ್ ಪರಿವರ್ತಕಗಳನ್ನು ರಿಪೇರಿ ಮಾಡಲು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪ್ರಯತ್ನ ನಡೆಸಿದ್ದಾರೆ.
ಅಂದಾಜು 511 ವಿದ್ಯುತ್ ಪರಿವರ್ತಕಗಳು ನೀರಿನಿಂದಾಗಿ ಹಾನಿಯಾದರೆ, 1500 ವಿದ್ಯುತ್ ಕಂಬಗಳು ಬಿದ್ದಿವೆ. ನೀರಿನ ರಭಸದಿಂದಾಗಿ ವಿದ್ಯುತ್ ಕಂಬ, ತಂತಿ ಮತ್ತು ವಿದ್ಯುತ್ ಪರಿವರ್ತಕಗಳ ಮೇಲೆ ಮರಗಳು ಬಿದ್ದಿರುವುದರಿಂದ ಅಂದಾಜು 200 ಪರಿವರ್ತಕಗಳು ಮತ್ತು 600ಕ್ಕೂ ಹೆಚ್ಚು ಕಂಬಗಳು ಸಂಪೂರ್ಣವಾಗಿ ನೆಲಕ್ಕೆ ಉರಳಿವೆ ಎಂದು ರಬಕವಿ ವಿಭಾಗದ ಹೆಸ್ಕಾಂ ಅಧಿಕಾರಿ ಶಕುಂತಲಾ ನಾಯಕ ತಿಳಿಸಿದ್ದಾರೆ.
ಇನ್ನು ನೀರು ಪೂರೈಕೆ ಸ್ಥಾವರಗಳಿಗೆ ವಿದ್ಯುತ್ ಪೂರೈಕೆ ಕಾರ್ಯ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ ಆದಷ್ಟು ಬೇಗನೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ಹೊಲ, ತೋಟಗಳಲ್ಲಿ ಬಿದ್ದಿರುವ ಕಂಬಗಳ ಸಮೀಪವಾಗಲಿ, ವಿದ್ಯುತ್ ತಂತಿಗಳ ಸಮೀಪಕ್ಕೆ ಹೋಗುವುದಾಗಲಿ ಮತ್ತು ಅವುಗಳನ್ನು ಮುಟ್ಟುವುದಾಗಲಿ ಮಾಡಬಾರದು ಎಂದು ಶಕುಂತಲಾ ನಾಯಕ ತಿಳಿಸಿದ್ದಾರೆ.