ಬಾಗಲಕೋಟೆ: ಕಾಂಗ್ರೆಸ್ ಪಕ್ಷದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎಂದು ಜಗಳವಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಇಬ್ಬರು ಮುಖ್ಯಮಂತ್ರಿ ಯಾಗಬೇಕು ಎಂದು ಕಿತ್ತಾಟ ನಡೆಸುತ್ತಿದ್ದಾರೆ. ಈ ಬಾರಿ ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ ವಿನಾಕಾರಣ ಏಕೆ ಜಗಳವಾಡುತ್ತೀರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ ತೇರದಾಳ ಮತಕ್ಷೇತ್ರದ ರಬಕವಿ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಿದೆ, ಸಚಿವ ಮುರಗೇಶ್ ನಿರಾಣಿ, ಗೋವಿಂದ ಕಾರಜೋಳ, ಜಗದೀಶ ಗುಡಗುಂಟಿ, ಸಿದ್ದು ಸವದಿ ಅವರನ್ನ ವೇದಿಕೆಗೆ ಕರೆದು ಬಿಜೆಪಿಯನ್ನು ಗೆಲ್ಲಿಸುವಂತೆ ಜನರಲ್ಲಿ ಅಮಿತ್ ಶಾ ಮನವಿ ಮಾಡಿದರು. ಮೋದಿ ಅವರ ಕೈ ಬಲ ಪಡಿಸಬೇಕಿದೆ. ರಾಜ್ಯದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸಾಕಷ್ಟು ಅನುದಾನ ಬಂದಿದೆ. ಕಾಂಗ್ರೆಸ್ ಸರ್ಕಾರ ಬಂದರೆ ಅಭಿವೃದ್ಧಿ ರಿವರ್ಸ್ ಗೇರ್ ನಲ್ಲಿ ಹೋಗುತ್ತದೆ. ಕಾಂಗ್ರೆಸ್ ಬಂದರೆ ದಂಗೆಗಳಾಗುತ್ತವೆ, ಅಭಿವೃದ್ಧಿಗೆ ಬ್ರೆಕ್ ಬೀಳುತ್ತೆ ಎಂದು ಶಾ ಟೀಕಿಸಿದರು.
ಇದೇ ಸಮಯದಲ್ಲಿ, ಕರ್ನಾಟದ ಸರ್ಕಾರದ ಒಳಮೀಸಲಾತಿ ಸಮರ್ಥಿಸಿಕೊಂಡ ಅಮಿತ್ ಶಾ, ಎಲ್ಲ ಸಮಾಜದ ಮೀಸಲಾತಿ ಹೆಚ್ಚಿಸುವ ಮೂಲಕ ಬಿಜೆಪಿ ಜನರ ಕಲ್ಯಾಣ ಮಾಡಿದೆ. ಸಾಮಾಜಿಕ ನ್ಯಾಯದ ಪಾಲನೆ ಮಾಡಿದ್ದೇವೆ ಎಂದರು. ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾವು ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿಯನ್ನು ವಾಪಸ್ ತರುತ್ತೇವೆ ಅಂತಾರೆ. ಕಾಂಗ್ರೆಸ್ ಅಧ್ಯಕ್ಷರೇ ಮುಸ್ಲಿಮರ 4% ಮೀಸಲಾತಿ ಏರಿಸಲು ಯಾವ ಜನಾಂಗದ ಮೀಸಲಾತಿ ಕಡಿಮೆ ಮಾಡುವಿರಿ ಹೇಳಿ, ಲಿಂಗಾಯತರದ್ದು ಕಿತ್ತು ಕೊಡ್ತೀರಾ, ಒಕ್ಕಲಿಗ, ದಲಿತರ, ಎಸ್ಸಿ, ಎಸ್ಟಿ ಮೀಸಲಾತಿ ಕಿತ್ತು ಯಾರಿಗೆ ಕೂಡುತ್ತೀರಾ ಎಂದು ಪ್ರಶ್ನೆ ಮಾಡಿದರು.
ನಮ್ಮ ಇಬ್ಬರು ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಗೆಲ್ಲಬೇಕು ಎಂದುಕೊಂಡಿದ್ದಾರೆ. ಲಿಂಗಾಯತರಿಗೆ ಕಾಂಗ್ರೆಸ್ನವರಿಂದ ಲಿಂಗಾಯತರಿಗೆ ಮೇಲಿಂದ ಮೇಲೆ ಅಪಮಾನವಾಗುತ್ತಿದೆ. ಈ ಹಿಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರಿಗೂ ಅಪಮಾನ ಮಾಡಿ ಹೊರಹಾಕಿದ್ದಾರೆ. ಹೀಗಾಗಿ ರಾಜ್ಯ ಮತ್ತು ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಬರಲು ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರು PFI ಬ್ಯಾನ್ ಮಾಡಿ. PFI ನ ಕಾರ್ಯಕರ್ತರನ್ನ ಜೈಲಿಗೆ ಕಳುಹಿಸಿದ್ದರು. ಕಾಶ್ಮೀರ ನಮ್ಮದು ಹೌದೋ ಅಲ್ವೋ? ನಮ್ಮದು ಅದು. ಮೋದಿ ಅವರು ಒಂದೇ ಹೊಡೆತಕ್ಕೆ 370ನೇ ವಿಧಿಯನ್ನ ರದ್ದಪಡಿಸಿದ್ದರು. ಜೆಡಿಎಸ್, ಕಾಂಗ್ರೆಸ್, ಸಮಾಜವಾದಿ ಪಾರ್ಟಿಯವರು ತಮ್ಮ ಮತ ಬ್ಯಾಂಕ್ಗಾಗಿ ಎಲ್ಲರೂ ಕಾಗೆಯಂತೆ ಮಾಡಿದರು ಎಂದು ಅಮಿತ್ ಶಾ ವ್ಯಂಗ್ಯವಾಡಿದರು.
ಈ ಭಾಗದ ಮಹಾದಾಯಿ ವಿವಾದವನ್ನ ಬಗೆಹರಿಸಿದ್ದು ಬಿಜೆಪಿ. ಬದಲಾಗಿ ಈ ಹಿಂದೆ ಮಹಾದಾಯಿಗೆ ಸಂಬಂಧಿಸಿದ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಇದ್ರೂ ಮಹಾದಾಯಿ ವಿವಾದ ಬಗೆಹರಿಯಲಿಲ್ಲ. ಕರ್ನಾಟಕ ಸರ್ಕಾರ. ನೇಕಾರ ವಿಕಾಸ ಯೋಜನೆಯ ಮೂಲಕ ನೇಕಾರ ಮಕ್ಕಳಿಗೆ ಶಿಕ್ಷಣ ನೀಡಲಾಗಿದೆ. ಬಾದಾಮಿ, ಐಹೊಳೆ, ಪಟದಕಲ್ಲು ಸೇರಿ ವಿವಿಧ ಪ್ರವಾಸಿ ಕೇಂದ್ರಗನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದರು.
ಇನ್ನು ಈ ವೇಳೆ ಸಂಸದರಾದ ಪಿ ಸಿ ಗದ್ದಿಗೌಡರ, ತೇರದಾಳ ಕ್ಷೇತ್ರದ ಅಭ್ಯರ್ಥಿ ಸಿದ್ದು ಸವದಿ, ಸಚಿವರಾದ ಗೋವಿಂದ ಕಾರಜೋಳ, ಮುರಗೇಶ್ ನಿರಾಣಿ, ಜಮಖಂಡಿ ಕ್ಷೇತ್ರದ ಅಭ್ಯರ್ಥಿ ಜಗದೀಶ ದುಡಗಂಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಬಸವರಾಜ ಬೊಮ್ಮಾಯಿಯಂಥ ಭ್ರಷ್ಟ ಸಿಎಂಅನ್ನು ಈ ಹಿಂದೆ ನೋಡಿರಲಿಲ್ಲ: ಸಿದ್ದರಾಮಯ್ಯ