ಬಾಗಲಕೋಟೆ: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಜಿಲ್ಲೆಯ ಏಳು ವಿದ್ಯಾರ್ಥಿಗಳು 625 ಕ್ಕೆ 624 ಅಂಕಗಳನ್ನು ಪಡೆದುಕೊಂಡು ಸಾಧನೆಗೈದಿದ್ದಾರೆ. ಬಾಗಲಕೋಟೆ ಸೇಂಟ್ ಆನ್ ಕನ್ವೆಂಟ್ ಹೈಸ್ಕೂಲ್ ವಿದ್ಯಾರ್ಥಿ ಶ್ರವಣ ನರೆಗಲ್ ಎಂಬುವವರು ಎಲ್ಲ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದು, ಸಮಾಜ ವಿಜ್ಞಾನ ವಿಷಯದಲ್ಲಿ ಮಾತ್ರ 99 ಅಂಕಗಳನ್ನು ಪಡೆದುಕೊಂಡಿದ್ದಾನೆ. ಈ ಮೂಲಕ 625ಕ್ಕೆ 624 ಅಂಕ ಪಡೆದಿದ್ದಾನೆ.
ಬಾಗಲಕೋಟೆ ಜಿಲ್ಲೆಗೆ 84.71 ಫಲಿತಾಂಶ ಬಂದಿದ್ದು, 'ಎ' ಗ್ರೇಡ್ ನಲ್ಲಿ ಬಾಗಲಕೋಟೆ ಜಿಲ್ಲೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ತಂದೆ-ತಾಯಿಯ ಪ್ರೇರಣೆ ಹಾಗೂ ಶಿಕ್ಷಕರು ನೀಡಿರುವ ಮಾರ್ಗದರ್ಶನ ಮೂಲಕ ಹೆಚ್ಚು ಅಂಕಗಳನ್ನು ಗಳಿಸುವುದಕ್ಕೆ ಸಾಧ್ಯವಾಗಿದೆ ಎಂದು ವಿದ್ಯಾರ್ಥಿ ಸಂತಸ ಹಂಚಿಕೊಂಡಿದ್ದಾರೆ.
ಪಾಲಕರು ಸಹ ತಮ್ಮ ಮಕ್ಕಳ ಹಗಲು ರಾತ್ರಿ ವಿದ್ಯಾಭ್ಯಾಸ ಮಾಡಿ, ಸತತ ಪ್ರಯತ್ನದಿಂದಾಗಿ ಹೆಚ್ಚಿನ ಅಂಕ ಗಳಿಸಿರುವುದು ಸಂತಸ ಮೂಡಿಸಿದೆ ಎಂದು ತಿಳಿಸಿದರು. ಇದರ ಜೊತೆಗೆ ಮತ್ತೋರ್ವ ವಿದ್ಯಾರ್ಥಿನಿಯಾಗಿರುವ ಸೌಮ್ಯ ಅಮಲಝರಿ ಎಂಬುವರು 625 ಕ್ಕೆ 624 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಂಪುರ ಗ್ರಾಮದ ನಿವಾಸಿಯಾಗಿರುವ ಈ ವಿದ್ಯಾರ್ಥಿನಿ 99.84 ಪ್ರತಿಶತ ಅಂಕ ಪಡೆದು ಸಾಧನೆ ಮಾಡಿದ್ದಾರೆ.
ರಾಮಪುರ ನಗರದ ಪೂರ್ಣಪ್ರಜ್ಞೆ ಆಂಗ್ಲ ಮಾಧ್ಯಮ ಹೈಸ್ಕೂಲ್ನಲ್ಲಿ ಅಧ್ಯಯನ ಮಾಡಿ ಗಮನ ಸೆಳೆದಿದ್ದಾರೆ. ಮಗಳು ಉತ್ತಮ ಅಂಕ ಪಡೆದ ಹಿನ್ನೆಲೆ ಮನೆಯಲ್ಲಿ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನನ್ನ ಸಾಧನೆಗೆ ನನ್ನ ಗುರುಗಳು ಮತ್ತು ತಂದೆ-ತಾಯಿಯೇ ಕಾರಣ ಎಂದ ಸೌಮ್ಯ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾಳೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಫಲಿತಾಂಶ ಹೊರಬಿದ್ದ ದಿನವೇ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ