ಬಾಗಲಕೋಟೆ: ಜಿಲ್ಲೆಗೆ ಬರುತ್ತಿರುವ ಮತ್ತು ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸುತ್ತಿರುವ ವ್ಯಕ್ತಿಗಳಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಕೆಲವು ಗ್ರಾಮಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
ಕಳೆದ ದಿನ ಮಹಿಳೆ (56 ವರ್ಷ) ಯೊಬ್ಬರು ಹುಬ್ಬಳ್ಳಿ-ಧಾರವಾಡದಿಂದ, ಇಲಕಲ್ ತಾಲೂಕಿನ ಗುಡೂರ ಗ್ರಾಮಕ್ಕೆ ಆಗಮಿಸಿದ್ದು, ಕೊರೊನಾ ತಗುಲಿರುವುದು ದೃಢಪಟ್ಟಿದೆ. ಧಾರವಾಡದ ಮಹಿಳೆಗೆ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆಗೆ ಪಾಸಿಟಿವ್ ವರದಿ ಬಂದ ಪರಿಣಾಮ, ಇಡೀ ಗ್ರಾಮವನ್ನೇ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಇನ್ನೂ ಮಹಿಳೆಯ ಸಂಪರ್ಕಕ್ಕೆ ಬಂದಿರುವವರನ್ನು ಕ್ವಾರಂಟೈನ್ ಮಾಡಲಾಗಿದೆ.
ಇನ್ನೊಂದೆಡೆ ಅಬಕಾರಿ ಇಲಾಖೆಯ ಸಿಬ್ಬಂದಿಗೆ ಕೊರೊನಾ ತಗುಲಿರುವ ಹಿನ್ನೆಲೆ ಬಾಗಲಕೋಟೆ ನಗರದ ರೇಲ್ವೆ ನಿಲ್ದಾಣ ಬಳಿ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ನಗರದ ರೇಲ್ವೆ ನಿಲ್ದಾಣ ಬಳಿ ಇರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ ಬಂದ ಕಾರಣ ಆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ.
ಕಲಾದಗಿ ಗ್ರಾಮದ ನಿವಾಸಿಯಾಗಿರುವ ಹಿನ್ನೆಲೆ, ಆತ ವಾಸ ಮಾಡುತ್ತಿರುವ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಇನ್ನೂ ಇವರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.