ಬಾಗಲಕೋಟೆ: ಇಂದು ಒಂದೇ ದಿನದಲ್ಲಿ 13 ಮಂದಿ ಸೋಂಕಿತರು ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ 35 ಇದ್ದ ಸೋಂಕಿತರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಈಗ ಐತಿಹಾಸಿಕ ನಗರ ಬಾದಾಮಿ ಪಟ್ಟಣಕ್ಕೂ ಕಾಲಿಟ್ಟ ಕೊರೊನಾ, ಉಡುಪಿಯಿಂದ ಬಂದಿದ್ದ ಬಾದಾಮಿ ಪಟ್ಟಣದ 26 ವರ್ಷದ ಯುವತಿಯಲ್ಲಿ ಕಾಣಿಸಿಕೊಂಡಿದೆ.
ಇನ್ನೊಂದೆಡೆ ಗರ್ಭಿಣಿಯಿಂದ ಬಾದಾಮಿ ತಾಲೂಕಿನ ಢಾಣಕಶಿರೂರ ತಲ್ಲಣಗೊಂಡಿದೆ. ರೋಗಿ ಸಂಖ್ಯೆ 607 ಆದ 23 ವರ್ಷದ ಗರ್ಭಿಣಿಯ ಸಂಪರ್ಕದಿಂದ 12 ಜನರಿಗೆ ಸೋಂಕು ಧೃಡಪಟ್ಟಿದೆ. ಗರ್ಭಿಣಿಗೆ ಸೀಮಂತ ಮಾಡಲು ಊಟಕ್ಕೆ ಕರೆದಿದ್ದ ಗ್ರಾಮದ ಅನೇಕ ಕುಟುಂಬಗಳು ಈಗ ಆತಂಕಪಡುವಂತಾಗಿದೆ. ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಆಕೆಗೆ ಸೋಂಕು ತಗುಲಿದ್ದು ಹೇಗೆ ಎಂಬುದು ಪತ್ತೆಯಾಗಿಲ್ಲ.
ರೋಗಿ 607 ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇದ್ದಾಗ ಮೇ 3ರಂದು ಸೋಂಕು ಪತ್ತೆಯಾಗಿದ್ದು, ಅದಕ್ಕೂ ಮುಂಚೆ ಏಪ್ರಿಲ್ 27ರಂದು ಢಾಣಕಶಿರೂರು ಗ್ರಾಮದಿಂದ ತನ್ನ ತವರು ಮನೆ ಗದಗ ಜಿಲ್ಲೆ ರೋಣ ತಾಲೂಕಿನ ಕೃಷ್ಣಾಪುರ ಗ್ರಾಮಕ್ಕೆ ಹೋಗಿದ್ದರು. ಏಪ್ರಿಲ್ 28ರಂದು ಆರೋಗ್ಯ ಏರುಪೇರಾಗಿ ರೋಣದಲ್ಲಿ ಎರಡು ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಬಳಿಕ ಧಾರವಾಡದ ಖಾಸಗಿ ಆಸ್ಪತ್ರೆ, ಕೊನೆಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲಾಗುತ್ತಿದೆ.
ಗರ್ಭಿಣಿಗೆ ಸೋಂಕು ದೃಢಪಟ್ಟ ಬಳಿಕ ಢಾಣಕಶಿರೂರ ಗ್ರಾಮದ 128 ಜನರನ್ನು ಕ್ವಾರಂಟೈನ್ ಇಡಲಾಗಿದ್ದು, ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. ಅಷ್ಟೂ ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಇದೀಗ 12 ಜನರಿಗೆ ಸೋಂಕು ದೃಢವಾಗಿದ್ದು, ಗ್ರಾಮದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಬಾದಾಮಿ ಮಾಜಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರವಾಗಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಿದ್ದರಾಮಯ್ಯ ತಾಲೂಕು ಅಧಿಕಾರಿಗಳಿಗೆ ಸೂಚಿಸಿದ್ದಾರೆ. 13 ಸೋಂಕಿತರು ವರದಿಯಾಗಿರುವ ಹಿನ್ನೆಲೆಯಲ್ಲಿ ಎಚ್ಚರ ವಹಿಸುವಂತೆ ಹಾಗೂ ಸೋಂಕು ಹರಡದಂತೆ ನೋಡಿಕೊಳ್ಳಲು ದೂರವಾಣಿಯಲ್ಲಿ ಜಿಲ್ಲಾಧಿಕಾರಿಗಳು, ಬಾದಾಮಿ ತಹಶೀಲ್ದಾರ್, ತಾಲೂಕು ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದಾರೆ.