ಬಾಗಲಕೋಟೆ: ಜಿಲ್ಲೆಯಲ್ಲಿ ದಿನೇ ದಿನೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಿದ್ದ ನಿಯಮವನ್ನೇ ಮೇ 17 ವರೆಗೆ ಲಾಕ್‍ಡೌನ್ ಮುಂದುವರೆಸಲಾಗಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸದಿದ್ದರೆ 100 ರಿಂದ 500 ರೂ.ಗಳ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ನಗರದ ಐಬಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರು ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಬೇಕು. ಧರಿಸದೇ ಇದ್ದಲ್ಲಿ 100 ರೂ. ದಂಡ ವಿಧಿಸಲಾಗುವುದು. 2ನೇ ಬಾರಿ ಮಾಸ್ಕ್ ಧರಿಸದೇ ಇರುವುದು ಕಂಡು ಬಂದಲ್ಲಿ 500 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ ಎಂದು ಕಾರಜೋಳ ತಿಳಿಸಿದರು. ಕರ್ನಾಟಕ ರಾಜ್ಯವು ನೇರಳೆ ವಲಯದಲ್ಲಿದ್ದು, ಲಾಕ್‍ಡೌನ್‍ದಲ್ಲಿ ಕೆಲವು ಸಡಿಲಿಕೆ ನೀಡಲಾಗಿದೆ. ಜಿಲ್ಲೆಯ ಗಡಿ ಭಾಗಗಳನ್ನು ಸೀಲ್ ಮಾಡಲಾಗಿದೆ ಎಂದರು.
ಕೇಂದ್ರ ಸರ್ಕಾರದ ಆದೇಶದನ್ವಯ ಜಿಲ್ಲಾದ್ಯಂತ ಮೇ 4 ರಿಂದ 17 ವರೆಗೆ ಮದ್ಯ ರಾತ್ರಿವರೆಗೆ ಲಾಕ್‍ಡೌನ್ ಮುಂದುವರೆಯಲಿದ್ದು, ರಾತ್ರಿ 7 ರಿಂದ ಬೆಳಗ್ಗೆ 7 ವರೆಗೆ ಸಿ.ಆರ್.ಪಿ.ಸಿ ಕಲಂ 144 ವಿಧಿಸಲಾಗಿದೆ. ಜಿಲ್ಲೆಯಲ್ಲಿ ಜರಗುವ ಸಂಜೆ, ಜಾತ್ರೆ ಹಾಗೂ ಸಮಾರಂಭಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೃಷಿ ಚಟುವಟಿಕೆಗಳು ನಡೆಯಲಿದ್ದು, ಬೀಜ ಮತ್ತು ರಸಗೊಬ್ಬರಗಳ ಕೊರತೆ ಇರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯ ಕಾಮಗಾರಿಗಳು ಚಾಲ್ತಿಯಲ್ಲಿರುತ್ತವೆ. ಅವಶ್ಯಕ ಹಿಟ್ಟಿನ ಗಿರಣಿ, ಅಗತ್ಯ ವಸ್ತುಗಳ ಘಟಕಗಳು, ಬೀಜೋತ್ಪಾದನಾ ಕೇಂದ್ರಗಳು, ಕೈಗಾರಿಕೆಗಳು ನಡೆಯಲಿವೆ ಎಂದರು.
ಜಿಲ್ಲೆಯ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇತರ ವ್ಯಕ್ತಿಗಳು ಬೇರೆ ರಾಜ್ಯಕ್ಕೆ ತೆರಳಬೇಕಾದಲ್ಲಿ ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದಾಗಿದೆ. ಜಿಲ್ಲೆಯಿಂದ ರಾಜ್ಯದ ಬೇರೆ ಜಿಲ್ಲೆಗೆ ಸ್ವಂತ ವಾಹನಗಳಲ್ಲಿ ಪ್ರಯಾಣಿಸುವವರು ಜಿಲ್ಲೆಯಲ್ಲಿ ಪ್ರಾರಂಭಿಸಿದ ತಂತ್ರಾಂಶದ ಮೂಲಕ ಒನ್-ಟೈಮ್, ಒನ್-ಡೇ, ಒನ್-ವೇ ಗೆ ಮಾತ್ರ ಪಾಸನ್ನು ಅರ್ಜಿ ಸಲ್ಲಿಸಿ ಸಂಬಂಧಿಸಿದ ತಹಶೀಲ್ದಾರರ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂದರು.
ಇನ್ನು ಎಲ್ಲಂದರಲ್ಲಿ ಗುಟ್ಕಾ, ಎಲೆ ಅಡಿಕೆ ತಿಂದು ಉಗುಳಬಾರದು. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಪಡೆಯಲು ಬ್ಯಾಂಕ್‍ಗಳಿಗೆ ತೆರಳುವ ಬದಲು ಅಂಚೆ ಕಚೇರಿಗೆ ದೂರವಾಣಿ ಮೂಲಕ ಕರೆ ಮಾಡಿದಲ್ಲಿ ಅಂಚೆ ಇಲಾಖೆಯವರು ಮನೆ ಬಾಗಿಲಿಗೆ ಬಂದು ಹಣ ಸಂದಾಯ ಮಾಡಲಿದ್ದಾರೆ ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ ಇದ್ದರು.