ಟೋಕಿಯೋ(ಜಪಾನ್): 2020ರ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಅಥ್ಲೀಟ್ಸ್ಗಳು ಐತಿಹಾಸಿಕ ಸಾಧನೆ ಮಾಡಿದ್ದು, ಈಗಾಗಲೇ ಅನೇಕ ಕ್ರೀಡಾಪಟುಗಳು ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಇದೀಗ ಕನ್ನಡಿಗ ಸುಹಾಸ್ ಲಲಿನಕೆರೆ ಯತಿರಾಜ್ ಇಂದು ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಇವರು, ಈಗಾಗಲೇ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದು, ಇಂದು ಚಿನ್ನಕ್ಕಾಗಿ ಸೆಣಸಾಟ ನಡೆಸಲಿದ್ದಾರೆ.
38 ವರ್ಷದ ಸುಹಾಸ್, ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿನ ಫೈನಲ್ ಪಂದ್ಯದಲ್ಲಿ ಸೋಲು ಕಂಡರೂ ಕೂಡ ಬೆಳ್ಳಿ ಪದಕಕ್ಕೆ ಮುತ್ತಿಕ್ಕಲಿದ್ದಾರೆ. 2007ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಇವರು ಪ್ರಯಾಗ್ರಾಜ್ ಸೇರಿದಂತೆ ಯುಪಿಯ ಅನೇಕ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಚಿನ್ನ ಗೆದ್ದಿರುವ ಭಾರತದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸುಹಾಸ್ ಹುಟ್ಟಿದ್ದು ಹಾಸನದಲ್ಲಿ. ಜೊತೆಗೆ ಎನ್ಐಟಿ ಕರ್ನಾಟಕದಿಂದ ಕಂಪ್ಯೂಟರ್ ಎಂಜಿನಿಯರ್ ಆಗಿ ಪದವಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿರಿ: ನಟ ಸಲ್ಮಾನ್ ಖಾನ್ ಸೇರಿ 38 ತಾರೆಯರ ವಿರುದ್ಧ ದೆಹಲಿಯಲ್ಲಿ ದೂರು ದಾಖಲು... ಕಾರಣ?
ಹಿಂದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ
ಸೆಮಿಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಅಥ್ಲೀಟ್ ವಿರುದ್ಧ ಭರ್ಜರಿ ಆಟವಾಡಿರುವ ಸುಹಾಸ್ 21-9, 21-15 ಸೆಟ್ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮೊದಲು ನಡೆದ ಎರಡು ಪಂದ್ಯಗಳಲ್ಲೂ ಅವರು ಗೆಲುವು ದಾಖಲು ಮಾಡಿದ್ದರು.
ಎಸ್ಎಲ್ 4 ಕೆಟೆಗೆರಿಯಲ್ಲಿ ವಿಶ್ವದ 3ನೇ ಕ್ರಮಾಂಕದ ಆಟಗಾರನಾಗಿರುವ ಸುಹಾಸ್, ಇಂದಿನ ಫೈನಲ್ ಪಂದ್ಯದಲ್ಲಿ ಫ್ರಾನ್ಸಿನ ಲುಕಾಸ್ ಮಾಜರ್ ವಿರುದ್ಧ ಸೆಣಸಾಟ ನಡೆಸಲಿದ್ದಾರೆ. ಇಲ್ಲಿ ಗೆದ್ದರೂ ಅಥವಾ ಸೋತರೂ ಕೂಡ ಪ್ಯಾರಾಂಪಿಕ್ಸ್ನಲ್ಲಿ ಪದಕ ಗೆಲ್ಲುವ ಮೊದಲ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಲಿದ್ದಾರೆ.