ನ್ಯೂಯಾರ್ಕ್: ಭಾರತ್ ರೋಹನ್ ಬೋಪಣ್ಣ ಮತ್ತು ಕೆನಾಡಾದ ಡೇನಿಸ್ ಶಪೊವಲೋವ್ ಜೋಡಿ ವೆಸ್ಟರ್ನ್ ಮತ್ತು ಸದರ್ನ್ ಓಪನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಸೋಲನುಭವಿಸಿದ್ದಾರೆ.
42,22,190 ಯುಎಸ್ ಡಾಲರ್ ಮೊತ್ತದ ಟೂರ್ನಿಯಲ್ಲಿ ಬೋಪಣ್ಣ ಮತ್ತು ಶಪೊವಲೋವ್ ಕಳೆದ ಬಾರಿಯ ಯುಎಸ್ ಓಪನ್ ರನ್ನರ್ ಅಪ್ ಆಗಿರುವ ಮಾರ್ಸೆಲ್ ಗ್ರಾನೊಲರ್ಸ್ ಮತ್ತು ಹೊರಾಸಿಯೊ ಜೆಬಲ್ಲೋಸ್ ವಿರುದ್ಧ 4-6, 6-7(1) ಸೆಟ್ಗಳಿಂದ ಸೋಲನುಭವಿಸಿದೆ.
ಮಾರ್ಚ್ನಲ್ಲಿ ಕ್ರೊಯೇಷಿಯಾ ವಿರುದ್ಧ ನಡೆದಿದ್ದ ಡೇವಿಸ್ ಕಪ್ ನಂತರ ಬೋಪಣ್ಣ ಇದೇ ಮೊದಲ ಬಾರಿಗೆ ಟೆನಿಸ್ ಅಂಗಳಕ್ಕೆ ಕಣಕ್ಕಿಳಿದಿದ್ದರು. ಬೋಪಣ್ಣ ಕಳೆದ ವರ್ಷ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೂರ್ನಿಯಿಂದ ಸತತವಾಗಿ ಶಪೋವೊಲೊವ್ ಜೊತೆ ಜೋಡಿಯಾಗಿ ಆಡುತ್ತಿದ್ದಾರೆ.
ಈ ಪಂದ್ಯ ನಿಜಕ್ಕೂ ಪ್ರಬಲ ಪೈಪೋಟಿಯಿಂದ ಕೂಡಿತ್ತು. ಪ್ರಾಮಾಣಿಕವಾಗಿ ಹೇಳಬೇಕು ಎಂದರೆ 5 ತಿಂಗಳ ನಂತರ ನೇರವಾಗಿ ಟೂರ್ನಮೆಂಟ್ನಲ್ಲಿ ಪಾಲ್ಗೊಂಡಿದ್ದೆವು. ನಮ್ಮ ಪ್ರದರ್ಶನ ತುಂಬಾ ಖುಷಿ ನೀಡಿದೆ ಎಂದು ಬೋಪಣ್ಣ ಹೇಳಿದ್ದಾರೆ.
ಆಗಸ್ಟ್ 31ರಿಂದ ಅಮೆರಿಕ ಓಪನ್ ಆರಂಭವಾಗಲಿದ್ದು, ಅದಕ್ಕಾಗಿ ಅಭ್ಯಾಸ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಕೋವಿಡ್ ಕರಿ ನೆರಳಿನಲ್ಲಿ ಯುಎಸ್ ಓಪನ್ ಜರುಗುತ್ತಿದ್ದು, ಘಟಾನುಘಟಿಗಳಾದ ನಡಾಲ್, ಫೆಡರರ್, ವಾವ್ರಿಂಕ್ ಸೇರಿದಂತೆ ಬಹಳಷ್ಟು ಟಾಪ್ ರ‍್ಯಾಂಕ್ ಟೆನಿಸ್ ಆಟಗಾರರು ಈ ಟೂರ್ನಮೆಂಟ್ನಲ್ಲಿ ಪಾಲ್ಗೊಳ್ಳುತ್ತಿಲ್ಲ.