ನ್ಯೂಯಾರ್ಕ್: ಭಾರತದ ಅಗ್ರಮಾನ್ಯ ಟೆನ್ನಿಸ್ ಆಟಗಾರನಾಗಿರುವ ಸುಮಿತ್ ನಗಲ್ ಬುಧವಾರ ಯುಎಸ್ ಓಪನ್ಗೆ ನೇರ ಅರ್ಹತೆಗಿಟ್ಟಿಸಿರುವ ಸಂದೇಶವನ್ನು ಪಡೆದಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಹಲವಾರು ಟಾಪ್ ಟೆನ್ನಿಸ್ ಆಟಗಾರರು ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಮ್ನಿಂದ ಹೊರಗುಳಿಯಲು ನಿರ್ಧರಿಸಿರುವುದರಿಂದ 128 ಆಟಗಾರರು ಭಾಗವಹಿಸುವ ಸುತ್ತಿನಲ್ಲಿ 127 ನೇ ಶ್ರೇಯಾಂಕದ ನಗಲ್ ಕೊನೆಯ ಆಟಗಾರನಾಗಿ ಅವಕಾಶ ಪಡೆದಿದ್ದಾರೆ. ಇತ್ತೀಚಿನ ಎಟಿಪಿ ಶ್ರೇಯಾಂಕದನ್ವಯ ನಗಲ್ ಅವರನ್ನು ಆಯ್ಕೆ ಮಾಡಿರುವುದಾಗಿ ಟೂರ್ನಮೆಂಟ್ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ.
132 ನೇ ಶ್ರೇಯಾಂಕದ ಪ್ರಜ್ನೇಶ್ ಗುಣವರ್ದನ್ ಆಗಸ್ಟ್ 31ರಿಂದ ನಡೆಯುವ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲವಾದ್ದರಿಂದ ನಗಲ್ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಟೆನ್ನಿಸ್ ಆಟಗಾರರಾಗಿದ್ದಾರೆ.
ಕಳೆದ ವರ್ಷ ನಗಲ್ ಅರ್ಹತಾ ಸುತ್ತಿನ ಪಂದ್ಯಗಳನ್ನಾಡುವ ಮೂಲಕ ಯುಎಸ್ ಓಪನ್ಗೆ ಎಂಟ್ರಿಕೊಟ್ಟಿದ್ದರು. ಅವರು ತಮ್ಮ ಮೊದಲ ಸುತ್ತಿನಲ್ಲೇ 20 ಗ್ರಾಂಡ್ಸ್ಲಾಮ್ ಒಡೆಯ ರೋಜರ್ ಫೆಡರರ್ ಅವರನ್ನು ಎದುರಿಸಿದ್ದು. ಅಲ್ಲದೇ ಮೊದಲ ಸೆಟ್ ಗೆದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
22 ವರ್ಷದ ನಗಲ್ ರೋಜರ್ ಫೆಡರರ್ ವಿರುದ್ಧ 6-4, 1-6,2-6,4-6 ಸೆಟ್ಗಳಲ್ಲಿ ಸೋಲನುಭವಿಸಿದ್ದರು.
ಇನ್ನು ಟೂರ್ನಮೆಂಟ್ನಲ್ಲಿ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಭಾಗವಹಿಸದಿರುವುದರಿಂದ ನಂಬರ್ ಒನ್ ಶ್ರೇಯಾಂಕದ ನೊವಾಕ್ ಜೊಕೋವಿಕ್ ಎಲ್ಲರ ಆಕರ್ಷಣೆಯಾಗಲಿದ್ದಾರೆ. ಫೆಡರರ್ ಗಾಯದ ಸಮಸ್ಯೆ ಎದುರಿಸುತ್ತಿದ್ದರೆ, ನಡಾಲ್ ಕೋವಿಡ್ 19 ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.