ಮೆಲ್ಬೋರ್ನ್: ವಿಶ್ವದ ನಂಬರ್ ಒನ್ ಆಟಗಾರ ರಾಫೆಲ್ ನಡಾಲ್ ಆಸ್ಟ್ರೆಲಿಯ ಓಪನ್ನಲ್ಲಿ ತಮ್ಮದೇ ದೇಶದ ಆಟಗಾರನನ್ನು ಮಣಿಸಿ 4ನೇ ಸುತ್ತು ಪ್ರವೇಶಿಸಿದ್ದಾರೆ.
20 ನೇ ಗ್ರ್ಯಾಂಡ್ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ನಡಾಲ್ ತಮ್ಮ ದೇಶದವರೇ ಆದ ಪಬ್ಲೊ ಕರೆನೊ ಬುಸ್ಟಾ ಅವರನ್ನು 6-1,6-2,6-4 ರ ನೇರ ಸೆಟ್ಗಳ ಅಂತರದಲ್ಲಿ ಮಣಿಸುವ ಮೂಲಕ 16ರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ.
ಒಂದು ಗಂಟೆ 38 ನಿಮಿಷ ನಡೆದ ಕಾದಾಟದಲ್ಲಿ ಮೊದಲೆರಡು ಸೆಟ್ಗಳಲ್ಲಿ ಸುಲಭ ಜಯ ಸಾಧಿಸಿದ ನಡಾಲ್ ಮೂರನೇ ಸೆಟ್ನಲ್ಲಿ ಕೊಂಚ ಪ್ರತಿರೋಧ ಎದುರಾದರೂ 6-4ರಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ನಿಸ್ಸಂದೇಹವಾಗಿ ಇದು ನನಗೆ ಅತ್ಯುತ್ತಮ ಪಂದ್ಯವಾಗಿದೆ. ನಾಲ್ಕನೇ ಸುತ್ತು ಪ್ರವೇಶಿಸಿರುವುದಕ್ಕೆ ಖುಷಿಯಾಗಿದೆ. ಈ ದಿನ ಆರಂಭದಲ್ಲೇ ಅತ್ಯುತ್ತಮ ಸರ್ವ್ ಹಾಗೂ ಉತ್ತಮ ಫೋರ್‌ಹ್ಯಾಂಡ್ ಶಾಟ್ಗಳನ್ನು ಪ್ರಯೋಗಿಸಿದ್ದು ನನಗೆ ಅನುಕೂಲವಾಯಿತು ಎಂದು ನಡಾಲ್ ಹೇಳಿದರು.
ಈ ಜಯದ ಮೂಲಕ ನಡಾಲ್, ಬುಸ್ಟಾ ವಿರುದ್ಧದ ಜಯದ ಅಂತರವನ್ನು 5-0ಗೆ ಹೆಚ್ಚಿಸಿಕೊಂಡರು. ಅಲ್ಲದೇ ಸ್ಪೇನ್‌ನ ಆಟಗಾರರ ವಿರುದ್ಧ ಅವರು ಸತತ 18ನೆ ಜಯ ಸಾಧಿಸಿದರು.
33 ವರ್ಷದ ನಡಾಲ್ ಟೆನ್ನಿಸ್ ಜಗತ್ತಿನಲ್ಲಿ 1000 ಪಂದ್ಯದ ಗೆಲುವಿನ ದಾಖಲೆ ಬರೆಯಲು ಇನ್ನು ಕೇವಲ 16 ಗೆಲುವುಗಳ ಅಗತ್ಯವಿದೆ. ಇಷ್ಟು ಪಂದ್ಯಗಳನ್ನು ಗೆದ್ದರೆ ನಡಾಲ್ ಓಪನ್ ಕಾಲಘಟ್ಟದಲ್ಲಿ ಈ ಸಾಧನೆ ಮಾಡಿದ ಮೊದಲ ಟನ್ನಿಸ್ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಹಾಲೆಪ್ಗೆ ಜಯ:
ಹಾಲಿ ಮಹಿಳೆಯರ ವಿಂಬಲ್ಡನ್ ಚಾಂಪಿಯನ್ ಸಿಮೊನಾ ಹಾಲೆಪ್ ಕಜಕಿಸ್ತಾನದ ಯುಲಿಯಾ ಪುಟಿನ್ತ್ಸೆವಾ ವಿರುದ್ಧ 6-1, 6-4 ರ ಹಂತರದಲ್ಲಿ ಗೆಲುವು ಸಾಧಿಸಿ 16 ಹಂತಕ್ಕೆ ಕಾಲಿಟ್ಟರು. ಹಾಲೆಪ್ ಮುಂದಿನ ಸುತ್ತಿನಲ್ಲಿ ಬೆಲ್ಜಿಯಂನ ಎಲಿಸೆ ಮೆರಟೆನ್ಸ್ ವಿರುದ್ಧ ಕಾದಾಡಲಿದ್ದಾರೆ.
ಮತ್ತೊಂದು ಪಂದ್ಯದಲ್ಲಿ 18 ನೇ ಶ್ರೇಯಾಂಕದ ಜರ್ಮನ್ನ ಆ್ಯಂಜೆಲಿಕ್ ಕೆರ್ಬರ್ 6-2, 6-7(4), 6-3 ರಲ್ಲಿ ರಷ್ಯಾದ ಅನಾಸ್ತೇಸಿಯಾ ಪಾವ್ಲಿಯುಚೆಂಕೋವಾ ವಿರುದ್ಧ ಗೆದ್ದರು. ಅನಾಸ್ತೇಸಿಯಾ ಅವರು ವಿಶ್ವದ 2ನೇ ಶ್ರೇಯಾಂಕದ ಕರೋಲಿನಾ ಪಿಸ್ಕೋವಾ ವಿರುದ್ಧ ಗೆಲುವಿನ ನಗೆ ಬೀರಿದ್ದರು.