ನ್ಯೂಯಾರ್ಕ್: ಭಾನುವಾರ ಕೊನೆಗೊಂಡ ಯುಎಸ್ ಓಪನ್ನಲ್ಲಿ ರನ್ನರ್ ಅಪ್ ಆದ ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ ಭವಿಷ್ಯದಲ್ಲಿ ಅನೇಕ ಅವಕಾಶಗಳನ್ನು ಪಡೆಯಲಿದ್ದೇನೆ, ಒಂದಲ್ಲ ಒಂದು ದಿನ ಗ್ರಾಂಡ್ಸ್ಲಾಮ್ ಗೆದ್ದೇ ಗೆಲ್ಲುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ.
ಜ್ವರೆವ್ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೀಯಾದ ಡೊಮಿನಿಕ್ ಥೀಮ್ ವಿರುದ್ಧ 6-2,6-4, 4-6,3-6, 7-6 ಅಂತರದಿಂದ ಸೋಲುಕಂಡರು. ಮೊದಲೆರಡು ಸೆಟ್ಗಳಲ್ಲಿ ಭರ್ಜರಿಯಾಗಿ ಆಡಿ ಗೆದ್ದ ಜರ್ಮನ್ ಆಟಗಾರ ನಂತರ ಸತತ 3 ಸೆಟ್ಗಳಲ್ಲಿ ಕಠಿಣ ಹೋರಾಟದ ನಡುವೆಯೂ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ವಿಫಲರಾದರು.
ಪಂದ್ಯದ ನಂತರ ಮಾತನಾಡಿದ ಜ್ವರೆವ್, ಮೊದಲ ಗ್ರಾಂಡ್ಸ್ಲಾಮ್ ಪ್ರಶಸ್ತಿಗೆ ಡೊಮಿನಿಕ್ಗೆ ಮೊದಲು ನಾನು ಅಭಿನಂದನೆ ಸಲ್ಲಿಸುತ್ತೇನೆ. ನೀವು ಹಲವು ಸಂದರ್ಭಗಳಲ್ಲಿ ಪ್ರಶಸ್ತಿಯನ್ನು ತಪ್ಪಿಸಿಕೊಂಡಿದ್ದರಿಂದ ನಾನು ಟ್ರೋಫಿಯನ್ನು ಎತ್ತಿ ಹಿಡಿಯಬಹುದೆಂದು ಭಾವಿಸಿದ್ದೆ. ಆದರೆ ನಾನು ಇಲ್ಲಿ ರನ್ನರ್ ಅಪ್ ಭಾಷಣ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ನನ್ನ ಜೊತೆಯಿದ್ದು ಬೆಂಬಲ ನೀಡಿದ ನನ್ನ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಟೆನ್ನಿಸ್ ಕೆರಿಯರ್ನಲ್ಲಿ ಕಳೆದ ಎರಡು ವರ್ಷ ನನಗೆ ಸುಲಭವಾಗಿರಲಿಲ್ಲ. ಆದರೆ ನಾವು ಖಂಡಿತವಾಗಿಯೂ ಸರಿಯಾದ ದಾರಿಯಲ್ಲಿದ್ದೇವೆ. ಒಂದು ದಿನ ಖಂಡಿತ ನಾವು ಒಟ್ಟಿಗೆ ಟ್ರೋಫಿ ಎತ್ತಿ ಹಿಡಿಯಲಿದ್ದೇವೆ ಎಂದು 23 ವರ್ಷದ ಜ್ವರೆವ್ ಭಾವುಕರಾದರು.
ನಾನು ಗ್ರಾಂಡ್ಸ್ಲಾಮ್ ಚಾಂಪಿಯನ್ ಪಟ್ಟಕ್ಕೆ ತುಂಬಾ ಹತ್ತಿರಬಂದಿದ್ದೆ. ಅದಕ್ಕೆ ಕೆಲವೇ ಪಾಯಿಂಟ್ಗಳ ಅಂತರದಲ್ಲಿದ್ದೆ. ಆದರೆ ಮೂರನೇ ಸೆಟ್ಗಿಂತ 5ನೇ ಸೆಟ್ನಲ್ಲಿ ಉತ್ತಮ ಅವಕಾಶವಿದ್ದರೂ ನಾನು ಅದನ್ನು ಬಳಸಿಕೊಳ್ಳಲಿಲ್ಲ ಎಂದು ಜ್ವರೆವ್ ತಿಳಿಸಿದರು.
ನನಗೆ ಕೇವಲ 23 ವರ್ಷ. ಇದು ನನ್ನ ಕೊನೆಯ ಅವಕಾಶ ಎಂದು ನಾನು ಭಾವಿಸುವುದಿಲ್ಲ. ನಾನು ಮುಂದೊಂದು ದಿನ ಗ್ರಾಂಡ್ಸ್ಲಾಮ್ ಚಾಂಪಿಯನ್ ಆಗುತ್ತೇನೆ ಎಂಬ ನಂಬಿಕೆ ನನ್ನಲ್ಲಿದೆ ಎಂದಿದ್ದಾರೆ.