ಜೆನಿವಾ: ಇತ್ತೀಚೆಗೆ ಎರಡನೇ ಬಾರಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವಿಶ್ವದ ಸ್ಟಾರ್ ಟೆನಿಸ್ ಆಟಗಾರ ರೋಜರ್ ಫೆಡರರ್ ಆಸ್ಟ್ರೇಲಿಯಾ ಓಪನ್ನಿಂದ ಈಗಾಗಲೇ ಹಿಂದೆ ಸರಿದಿದ್ದಾರೆ. ಆದರೆ ಜೂನ್ನಲ್ಲಿ ನಡೆಯಲಿರುವ ವಿಂಬಲ್ಡನ್ನಲ್ಲೂ ಆಡುವುದು ಅನುಮಾನ ಎಂದು ಸ್ವಿಟ್ಜರ್ಲೆಂಡ್ ಮಾಧ್ಯಮಗಳು ವರದಿ ಮಾಡಿವೆ.
'ಸತ್ಯ ಸಂಗತಿಯೆಂದರೆ, ನಾನು ವಿಂಬಲ್ಡನ್ ಆಡುವುದೆಂದರೆ ಅದು ನಂಬಲಸಾಧ್ಯವಾದ ಆಶ್ಚರ್ಯ ಎಂದು ಭಾವಿಸುತ್ತೇನೆ' ಎಂದು 40 ವರ್ಷದ ಫೆಡರರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
2022ರ ಜನವರಿಯಲ್ಲಿ ನಡೆಯುವ ಮೊದಲ ಗ್ರ್ಯಾಂಡ್ ಸ್ಲಾಮ್ನಲ್ಲಿ ಆಡುವ ಪ್ರಶ್ನೆಯೇ ಇಲ್ಲ. ಏಕೆಂದರೆ ಇಂತಹ ಅಪರೇಷನ್ಗಳಿಗೆ ಒಳಗಾದರೆ ಚೇತರಿಸಿಕೊಳ್ಳಲು ತಿಂಗಳುಗಳೇ ಆಗುತ್ತದೆ. ಆದ್ದರಿಂದ ವಿಂಬಲ್ಡನ್ನಲ್ಲೂ ಆಡಲು ಸಾಧ್ಯವಾಗದಿದ್ದರೆ ಆಶ್ಚರ್ಯ ಪಡೆಬೇಕಾಗಿಲ್ಲ ಎಂದು ಫೆಡರರ್ ತಿಳಿಸಿದ್ದಾರೆ.
ವಿಂಬಲ್ಡನ್ ಜೂನ್ 27 ರಿಂದ ಆರಂಭವಾಗಲಿದೆ. 2021ರ ಜೂನ್ ತಿಂಗಳಲ್ಲಿ ವಿಂಬಲ್ಡನ್ ಕ್ವಾರ್ಟರ್ ಫೈನಲ್ ನಲ್ಲಿ ನೇರ ಸೆಟ್ಗಳಿಂದ ಸೋಲು ಕಂಡ ಬಳಿಕ ಯಾವುದೇ ಸ್ಪರ್ಧಾತ್ಮಕ ಟೆನಿಸ್ ಟೂರ್ನಿಗಳನ್ನಾಡಿಲ್ಲ. ಅವರು ಕಳೆದ ಕೆಲವು ವಾರಗಳ ಹಿಂದೆಯಷ್ಟೇ 18 ತಿಂಗಳಲ್ಲಿ 3ನೇ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಫೆಡರರ್ ಪ್ರಸ್ತುತ 20 ಗ್ರ್ಯಾಂಡ್ಸ್ಲಾಮ್ ಗೆದ್ದ ವಿಶ್ವದಾಖಲೆಯನ್ನು ಸರ್ಬಿಯಾದ ನೊವಾಕ್ ಜೋಕೊವಿಕ್ ಮತ್ತು ಸ್ಪೇನ್ನ ನಡಾಲ್ ಜೊತೆಗೆ ಹಂಚಿಕೊಂಡಿದ್ದಾರೆ. ಬಹುಶಃ ಆಸ್ಟ್ರೇಲಿಯನ್ ಓಪನ್ ವೇಳೆ ಈ ವಿಶ್ವದಾಖಲೆ ನಡಾಲ್ ಅಥವಾ ಜೋಕೊವಿಕ್ ಪಾಲಾಗಲಿದೆ.
ಇದನ್ನೂ ಓದಿ: WBBL: ಹರ್ಮನ್ಪ್ರೀತ್ ಕೌರ್ ಆಲ್ರೌಂಡ್ ಆಟದ ಮುಂದೆ ಮಂಧಾನ ಶತಕ ವ್ಯರ್ಥ