ನ್ಯೂಯಾರ್ಕ್: 2021ರ ಆಸ್ಟ್ರೇಲಿಯಾ ಓಪನ್, ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್ ಗೆದ್ದು ಫೆಡರರ್ ಮತ್ತು ನಡಾಲ್ ಜೊತೆ ಗರಿಷ್ಠ ಗ್ರ್ಯಾಂಡ್ ಸ್ಲಾಮ್ ಗೆದ್ದ ವಿಶ್ವ ದಾಖಲೆಯ ಹಂಚಿಕೊಂಡಿರುವ ಸರ್ಬಿಯನ್ ಸ್ಟಾರ್ ನೊವಾಕ್ ಜೋಕೊವಿಕ್ ಯುಎಸ್ ಓಪನ್ನಲ್ಲಿ ಶುಭಾರಂಭ ಮಾಡಿದ್ದಾರೆ.
ವಿಶ್ವದ ನಂಬರ್ 1 ಆಟಗಾರನಾಗಿರುವ ಜೋಕೊವಿಕ್ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್ 18 ವರ್ಷದ ಆಟಗಾರ ಹೊಲ್ಗರ್ ರೂನ್ ವಿರುದ್ಧ ಸುಲಭ ಜಯ ಸಾಧಿಸಿದರು. ಜೋಕೊವಿಕ್ 6-1, 6-7, 6-2, 6-1 ರ ಹಂತರದಲ್ಲಿ ಯುವ ಆಟಗಾರನ ವಿರುದ್ಧ ಪ್ರಾಬಲ್ಯ ಸಾಧಿಸಿದರು.
ಈಗಷ್ಟೇ ಟೆನಿಸ್ ಜಗತ್ತಿಗೆ ಕಾಲಿಟ್ಟಿರುವ 145 ಶ್ರೇಯಾಂಕದ ಡ್ಯಾನೀಸ್ ಪ್ಲೇಯರ್ 2ನೇ ಸೆಟ್ನಲ್ಲಿ ನಂಬರ್ 1 ಆಟಗಾರನನ್ನು ಮಣಿಸಿದ್ದೇ ಆತನ ದೊಡ್ಡ ಸಾಧನೆಯಾಯಿತು. ಅವರು 2 ವರ್ಷಗಳ ಹಿಂದೆ ಜೂನಿಯರ್ ಫ್ರೆಂಚ್ ಓಪನ್ ಗೆದ್ದಿದ್ದರು. ಆದರೆ ಗ್ರ್ಯಾಂಡ್ಸ್ಲಾಮ್ನಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದರು.
ಜೋಕೊವಿಕ್ ಯುಎಸ್ ಓಪನ್ ಗೆದ್ದರೆ 21 ಗ್ರ್ಯಾಂಡ್ ಸ್ಲಾಮ್ ಗೆದ್ದ ವಿಶ್ವದ ಮೊದಲ ಟೆನಿಸ್ ಪ್ಲೇಯರ್ ಎನಿಸಿಕೊಳ್ಳಲಿದ್ದಾರೆ. ಜೊತೆಗೆ ಡಾನ್ ಬಡ್ಜ್ (1938) ಮತ್ತು ರಾಡ್ ಲೇವರ್ (1962 ಮತ್ತು 1969) ನಂತರ ವರ್ಷದಲ್ಲಿ ಎಲ್ಲಾ ನಾಲ್ಕು ಗ್ರ್ಯಾಂಡ್ಸ್ಲಾಮ್ ಗೆದ್ದ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಜೋಕೊವಿಕ್ಗೂ ಮೊದಲು 3ನೇ ಶ್ರೇಯಾಂಕದ ಸಿಟ್ಸಿಪಾಸ್, 4ನೇ ಶ್ರೆಯಾಂಕದ ಅಲೆಕ್ಸಾಂಡರ್ ಜ್ವರೆವ್, 2ನೇ ಶ್ರೇಯಾಂಕದ ಡೇನಿಲ್ ಮೆಡ್ವೆಡೆವ್ ಈಗಾಗಲೇ 2ನೇ ಸುತ್ತು ಪ್ರವೇಶಿಸಿದ್ದಾರೆ.
ಇದನ್ನು ಓದಿ: ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದ ವಿಂಡೀಸ್ ಸ್ಫೋಟಕ ಬ್ಯಾಟ್ಸ್ಮನ್ ರಾಜಸ್ಥಾನಕ್ಕೆ ಸೇರ್ಪಡೆ