ಮೆಲ್ಬರ್ನ್ : ಆಸ್ಟ್ರೇಲಿಯಾ ಓಪನ್ಗಾಗಿ ಜೊತೆಗಾರನನ್ನು ಹುಡುಕುತ್ತಿದ್ದ ಭಾರತದ ಟೆನ್ನಿಸ್ ಸ್ಟಾರ್ ರೋಹನ್ ಬೋಪಣ್ಣರಿಗೆ ಕೊನೆಗೂ ಜೊತೆಗಾರ ಸಿಕ್ಕಿದ್ದಾರೆ. ಜಪಾನ್‌ನ ಬೆನ್ ಮೆಕ್‌ಲಾಚಲನ್ ಅವರೊಂದಿಗೆ ವರ್ಷದ ಮೊದಲ ಗ್ರ್ಯಾಂಡ್ಸ್ಲಾಮ್ನಲ್ಲಿ ಕಣಕ್ಕಿಳಿಯಲಿದ್ದಾರೆ.
ಬೋಪಣ್ಣ, ಪೋರ್ಚುಗಲ್ನ ಜೋವಾ ಸೌಸ ಅವರ ಜೊತೆ ಕಣಕ್ಕಿಳಿಯಬೇಕಿತ್ತು. ಆದರೆ, ಪೋರ್ಚುಗೀಸ್ ಆಟಗಾರನಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಕಾರಣ ಟೂರ್ನಿಯಿಂದ ಹೊರ ಬಿದ್ದಿದ್ದರು. ಅಂದಿನಿಂದ ಬೋಪಣ್ಣ ಜೊತೆಗಾರನ ಹುಡುಕಾಟದಲ್ಲಿದ್ದರು. ಆ ಹುಡುಕಾಟ ಶನಿವಾರಕ್ಕೆ ಅಂತ್ಯವಾಗಿದೆ.
ನಾನು ಅದೃಷ್ಟಶಾಲಿಯಾಗಿದ್ದೇನೆ. ದುರಾದೃಷ್ಟವಶಾತ್ ಬೆನ್ಸ್ ಜೊತೆಗಾರ ರಾವೆನ್ ಕ್ಲಾಸೆನ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಅವರೂ ಕೂಡ ಜೊತೆಗಾರನಿಗಾಗಿ ಹುಡುಕಾಡುತ್ತಿದ್ದರು. ಇದೀಗ ನಾವಿಬ್ಬರು ಒಟ್ಟಿಗೆ ಆಡಲು ಬದ್ಧರಾಗಿದ್ದೇವೆ. ಆದರೆ, ಇದು ಹೇಗೆ ನಡೆಯುತ್ತದೆ ಎಂಬುದನ್ನು ನೋಡಲು ಕಾತುರದಿಂದಿದ್ದೇನೆ.
ಖಂಡಿತವಾಗಿಯೂ ಪಾರ್ಟ್ನರ್ ಹುಡುಕುವುದು ಸುಲಭವಲ್ಲ. ಕೊನೆಗೂ ಒಬ್ಬ ಜೊತೆಗಾರ ಸಿಕ್ಕಿದ್ದು ಸಂತೋಷ ಎಂದು ಬೋಪಣ್ಣ ಪಿಟಿಐಗೆ ತಿಳಿಸಿದ್ದಾರೆ. ಆಸ್ಟ್ರೇಲಿಯಾ ಓಪನ್ ಫೆಬ್ರವರಿ 8ರಿಂದ ಆರಂಭವಾಗಲಿದೆ. ಬೋಪಣ್ಣ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚೀನಾದ ಡುವಾನ್ ಯಿಂಗ್‌ಯಿಂಗ್ ಜೊತೆಯಾಗಿ ಆಡಲಿದ್ದಾರೆ.
ಬೋಪಣ್ಣರನ್ನು ಹೊರೆತುಪಡಿಸಿದ್ರೆ, ಭಾರತದಿಂದ ದಿವಿಜ್ ಶರನ್ ಪುರುಷರ ಡಬಲ್ಸ್ನಲ್ಲಿ ಮತ್ತು ಸುಮಿತ್ ನಗಾಲ್ ಸಿಂಗಲ್ಸ್ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.
ಇದನ್ನು ಓದಿ: ಕೊಹ್ಲಿ vs ರೂಟ್.. ನಾಯಕರ ನಡುವಿನ ಕಾದಾಟದಲ್ಲಿ ಗೆಲ್ಲೋರ್ಯಾರು?