ಮೆಲ್ಬೋರ್ನ್: ದೋಹಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಅರ್ಹತಾ ಟೂರ್ನಮೆಂಟ್ನಲ್ಲಿ ಭಾಗವಹಿಸಿದ್ದ ಇಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಆಸ್ಟ್ರೇಲಿಯಾದಿಂದ ಇದೇ ಮೊದಲ ಬಾರಿಗೆ ಬೇರೆ ಸ್ಥಾನದಲ್ಲಿ ಆಯೋಜನೆಗೊಂಡಿರುವ ಅರ್ಹತಾ ಟೂರ್ನಿಯಲ್ಲಿ 4ನೇ ಶ್ರೇಯಾಂಕ ಪಡೆದಿದ್ದ ಅಮೆರಿಕಾದ ಡೇನಿಸ್ ಕುಡ್ಲ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದ ಬೆನ್ನಲ್ಲೇ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರು ಸೋಮವಾರ ಮೊದಲ ಸುತ್ತಿನಲ್ಲಿ 6-4, 6-3ರಲ್ಲಿ ಮಾರ್ಕೋದ ಎಲಿಯಟ್ ಬೆಂಚೆಟ್ರಿಟ್ ವಿರುದ್ಧ ಗೆಲುವು ಸಾಧಿಸಿದ್ದರು.
ಇನ್ನು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್ನ ಗಾರ್ಸಿಯಾ ಲೋಪೆಜ್ ಅವರನ್ನು 6-2, 6-4ರಲ್ಲಿ ಮಣಿಸಿ ದ್ವಿತೀಯ ಸುತ್ತು ಪ್ರವೇಶಿಸಿದ್ದ ಅರ್ಜೆಂಟೀನಾದ ರ್ಫರಾನ್ಸಿಸ್ಕೊ ಸೆರುಂಡೋಲೋ ಅವರಿಗೂ ಕೂಡ ಕೊರೊನಾ ಸೋಂಕು ತಗುಲಿದ್ದು, ಟೂರ್ನಿಯಿಂದ ತಮ್ಮ ಹೆಸರನ್ನು ವಾಪಸ್ ತೆಗೆದುಕೊಂಡಿದ್ದಾರೆ.
ಈಗಾಗಲೇ ಆಸ್ಟ್ರೇಲಿಯನ್ ಓಪನ್ ತಡವಾಗಿ ಆರಂಭಗೊಳ್ಳುತ್ತಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಪ್ರಯಾಣದ ನಿರ್ಬಂಧಗಳು ಮತ್ತು ಕ್ವಾರಂಟೈನ್ ವ್ಯವಸ್ಥೆಗೊಳಿಸಿದ್ದರಿಂದ ತಡವಾಗಿದ್ದು, ಫೆಬ್ರವರಿ 8ರಿಂದ ಪ್ರಾರಂಭವಾಗಲಿದೆ. ಟೂರ್ನಿಯಲ್ಲಿ ಭಾಗವಹಿಸುವ ಮುನ್ನ ಕಟ್ಟುನಿಟ್ಟಾದ ಕ್ವಾರಂಟೈನ್ ಮತ್ತು ಕೋವಿಡ್-19 ಟೆಸ್ಟ್ನಲ್ಲಿ ನೆಗೆಟಿವ್ ಪಡೆಯಬೇಕಿದೆ.