ದುಬೈ: ರವಿಶಾಸ್ತ್ರಿ ಅವರ ಕೋಚ್ ಹುದ್ದೆ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಜಿ ಕೋಚ್ಗೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರ ಒಡನಾಟವನ್ನು ಕೊಹ್ಲಿ ನೆನೆದಿದ್ದಾರೆ.
'ನಿಮ್ಮ ಜತೆ ಕಳೆದ ದಿನಗಳು ಅದ್ಭುತ. ಭಾರತ ಕ್ರಿಕೆಟ್ ತಂಡದ ಯಶಸ್ಸಿನಲ್ಲಿ ನಿಮ್ಮ ಪಾತ್ರ ಅಗಾಧ ಮತ್ತು ಯಾವತ್ತಿಗೂ ನೆನಪಿನಲ್ಲಿಡಬೇಕಾಗಿದೆ. ನಿಮ್ಮ ಮುಂದಿನ ಜೀವನಕ್ಕೆ 'ಆಲ್ ದಿ ಬೆಸ್ಟ್' ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ರವಿಶಾಸ್ತ್ರಿ ಕೋಚ್ ಅವಧಿಯಲ್ಲಿ ಭಾರತ ತಂಡ 43 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅದರಲ್ಲಿ 25 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 13ರಲ್ಲಿ ಪರಾಭವ ಹೊಂದಿದೆ. 76 ಏಕದಿನ ಪಂದ್ಯಗಳಲ್ಲಿ 51, 65 ಟಿ-20 ಪಂದ್ಯಗಳಲ್ಲಿ 43 ಜಯ ಕಂಡಿದೆ. ಅದರಲ್ಲೂ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಸರಣಿ ಶಾಸ್ತ್ರಿ ಅವಧಿಯಲ್ಲಿ ಅವಿಸ್ಮರಣೀಯವಾಗಿದ್ದು, 5 ಪಂದ್ಯಗಳ ಸರಣಿಯನ್ನು ಭಾರತ 2-1 ರಲ್ಲಿ ಗೆದ್ದು ಬೀಗಿತ್ತು.
ದುಬೈನಲ್ಲಿ ನಡೆದ ವಿಶ್ವಕಪ್ ಟಿ-20 ಟೂರ್ನಿ ವಿರಾಟ್ ಕೊಹ್ಲಿ ನಾಯಕತ್ವ ಮತ್ತು ರವಿಶಾಸ್ತ್ರಿ ಅವರ ಕೋಚ್ ಹುದ್ದೆಯ ಕೊನೆಯ ಟೂರ್ನಿ ಆಗಿದೆ.
ಭಾರತ ತಂಡ ದುಬೈನಿಂದ ಮರಳಿದ ಬಳಿಕ ನ್ಯೂಜಿಲೆಂಡ್ ವಿರುದ್ಧ ಟಿ-20 ಮತ್ತು ಟೆಸ್ಟ್ ಸರಣಿ ಆಡಲಿದೆ. ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಿದ್ದು, ಟೀಂನ ನೇತೃತ್ವ ವಹಿಸಲಿದ್ದಾರೆ.