ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಕಾಂಗರೂಗಳಿಗೆ ಸಿಂಹಳೀಯರ ಸವಾಲು ಎದುರಾಗಲಿದೆ. ತಾವಾಡಿರುವ ಮೊದಲ ಪಂದ್ಯಗಳಲ್ಲಿ ಉಭಯ ತಂಡಗಳು ಜಯ ಸಾಧಿಸಿದ್ದು, ಗೆಲುವಿನ ಓಟ ಮುಂದುವರೆಸುವ ಇರಾದೆಯೊಂದಿಗೆ ಕಣಕ್ಕಿಳಿಯಲಿವೆ.
ಆಸ್ಟ್ರೇಲಿಯಾ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ದಾಖಲಿಸಿದೆ. ಶ್ರೀಲಂಕಾ ತಂಡ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಿದೆ. ಎರಡೂ ತಂಡಗಳಲ್ಲೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುವ ಆಟಗಾರರಿರುವ ಕಾರಣ ಇಂದಿನ ಪಂದ್ಯ ಕುತೂಹಲ ಹೆಚ್ಚಿಸಿದೆ.
ಆಸ್ಟ್ರೇಲಿಯಾದಲ್ಲಿ ಸ್ಟೀವ್ ಸ್ಮಿತ್, ಆ್ಯರೊನ್ ಫಿಂಚ್, ಡೇವಿಡ್ ವಾರ್ನರ್, ಮಿಚಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್ರಂತಹ ಬ್ಯಾಟರ್ಗಳಿದ್ದಾರೆ. ಆದರೆ ಫಿಂಚ್, ವಾರ್ನರ್ ಕಳಪೆ ಬ್ಯಾಟಿಂಗ್ನಿಂದ ಹೆಣಗಾಡುತ್ತಿದ್ದು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಆದರೆ ಮ್ಯಾಕ್ಸ್ವೆಲ್ ಆಲ್ರೌಂಡ್ ಪ್ರದರ್ಶನ ಎದುರಾಳಿ ತಂಡಕ್ಕೆ ಅಪಾಯಕಾರಿಯಾಗಬಹುದು.
ಟಿ20 ಕ್ರಿಕೆಟ್ನಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 16 ಸಲ ಮುಖಾಮುಖಿಯಾಗಿದ್ದು, ತಲಾ 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿವೆ. ಟಿ20 ವಿಶ್ವಕಪ್ನಲ್ಲಿ 3 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, ಕಾಂಗರೂ ಪಡೆ 2 ಸಲ ಹಾಗೂ ಶ್ರೀಲಂಕಾ 1 ಪಂದ್ಯದಲ್ಲಿ ಗೆಲುವು ಪಡೆದಿವೆ.
ಇದನ್ನೂ ಓದಿ: ಶಿಲ್ಪಾ ಶೆಟ್ಟಿ ದಂಪತಿಯಿಂದ ಮಾನಸಿಕ ಕಿರುಕುಳ... 75 ಕೋಟಿ ರೂ. ಪರಿಹಾರ ಕೇಳಿದ ಶೆರ್ಲಿನ್
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕರಾರುವಾಕ್ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ಲಂಕಾ ವಿಫಲವಾಗಿದ್ರೂ ಕೂಡ, ಬ್ಯಾಟರ್ಗಳ ಅದ್ಭುತ ಪ್ರದರ್ಶನದಿಂದ ಜಯ ಸಾಧಿಸಿತ್ತು. ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನ ನೀಡಿ ಕಾಂಗರೂ ಪಡೆಗೆ ಟಾಂಗ್ ನೀಡಲು ತಂಡ ಉತ್ಸುಕವಾಗಿದೆ. ಅಸಲಂಕ, ಪಥುಮ್, ಆವಿಷ್ಕಾ ಹಾಗೂ ಹಸರಂಗ ಲಂಕಾಗೆ ಆಸರೆಯಾಗಬಹುದು.
ಸಂಭವನೀಯ ಆಟಗಾರರು..
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆ್ಯರೊನ್ ಫಿಂಚ್(ಕ್ಯಾಪ್ಟನ್),ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಸ್ಟೋಯ್ನಿಸ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಂಡಮ್ ಜಂಪಾ, ಹೇಜಲ್ವುಡ್
ಶ್ರೀಲಂಕಾ: ಕುಸಾಲ್ ಮೆಂಡಿಸ್, ಪಥುಮ್, ಅಸಲಂಕ, ಆವಿಷ್ಕಾ ಫರ್ನಾಂಡೋ, ಹಸರಂಗ, ರಾಜಪಕ್ಸಾ, ದಶುನ್ ಶಂಕಾ (ಕ್ಯಾಪ್ಟನ್), ಕರುಣಾರತ್ನೆ, ಚಮೀರ್, ಲಹಿರು ಕುಮಾರ್, ಮಹೀಶ್ ತೀಕ್ಷಣ, ದಿನೇಶ್ ಚಾಂಡಿಮಾಲ್
ಪಂದ್ಯ ಸಮಯ: ಸಂಜೆ 7.30 (ಭಾರತೀಯ ಕಾಲಮಾನ)
ಸ್ಥಳ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂ, ದುಬೈ