ನೂರ್ ಸುಲ್ತಾನ್: ಭಾರತದ ಸ್ಟಾರ್ ಕುಸ್ತಿಪಟುವಾದ ವಿಶ್ವದ ನಂಬರ್ ಒನ್ ಶ್ರೇಯಾಂಕದ ಭಜರಂಗ್ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ 2020ರ ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಪೂನಿಯಾ 65 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಕೋರಿಯಾದ ಜಾಂಗ್ ಸನ್ ಅವರನ್ನು 8-1 ರಿಂದ ಮಣಿಸಿ ಮುಂದಿನ ವರ್ಷದ ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡರು. ಪೂನಿಯಾ ಸೆಮಿಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ದೌಲೆತ್ ನಿಯಾಜ್ಬೆಕೋವ್ ಅವರನ್ನು ಎದುರಿಸಲಿದ್ದಾರೆ.
ಮತ್ತೊಬ್ಬ ಕುಸ್ತಿಪಟು ರವಿಕುಮಾರ್ 57 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಜಪಾನ್ನಯುಕಿ ತಕಹಶಿಯವರನ್ನು 6-1 ಅಂಕಗಳ ನೆರವಿನಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದರಲ್ಲದೆ, ಇವರೂ ಕೂಡ ಒಲಿಂಪಿಕ್ಗೆ ಅರ್ಹತೆಗಿಟ್ಟಿಸಿಕೊಂಡರು. ಕುಮಾರ್ ಸೆಮಿಫೈನಲ್ ಪಂದ್ಯದಲ್ಲಿ ರಷ್ಯಾದ ಜುವೆರ್ ಉಗೆವ್ ಅವರನ್ನು ಎದುರಿಸಲಿದ್ದಾರೆ.
ಹೀಗಾಗಲೆ ಮಹಿಳೆಯ 53 ಕೆಜಿ ವಿಭಾಗದಲ್ಲಿ ವಿನೇಶ್ ಫೋಗಟ್ ವಿಶ್ವಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದರಲ್ಲದೆ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡ ಮೊದಲ ಕುಸ್ತಿಪಟು ಎಂಬ ಕೀರ್ತಿಗೆ ಭಾಜನರಾಗಿದ್ದರು.