ಖರ್ಸವಾನ್ (ಜಾರ್ಖಂಡ್): 12 ವರ್ಷದವಳಾಗಿದ್ದಾಗ 'ದುರ್ಬಲ'ಳೆಂದು ತಿರಸ್ಕರಿಸಲ್ಪಟ್ಟಿದ್ದ ದೀಪಿಕಾ ಕುಮಾರಿ, ತಾವೂ ಈ ಕ್ರೀಡೆಗೆ ಸರಿಯಾದ ವ್ಯಕ್ತಿ ಎಂದು ಸಾಬೀತುಪಡಿಸಲು ಮೂರು ತಿಂಗಳ ಸಮಯ ತೆಗೆದುಕೊಂಡಿದ್ದರು. ಆದರೆ ಇಂದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬಿಲ್ಲುಗಾರಿಕೆಯಲ್ಲಿ (ಅರ್ಚರಿ) ಪದಕ ತಂದುಕೊಡುವಲ್ಲಿ ಮುಂಚೂಣಿಯಲ್ಲಿದ್ದಾರೆ.
ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿಯಾಗಿರುವ ದೀಪರಿಕಾ ಅವರ ಅರ್ಚರಿ ಜೀವನ ಪಯಣದ ಕಡೆ ಒಮ್ಮೆ ಕಣ್ಣು ಹಾಯಿಸಿದರೆ ಕ್ರೀಡೆಯ ಮೇಲಿನ ಅವರ ಹಿಡಿತ, ಧೈರ್ಯ ಮತ್ತು ದೃಢನಿಶ್ಚಯ ಯುವ ಪೀಳಿಗೆಗೆ ದಾರಿದೀಪವಾಗೋದು ನಿಸ್ಸಂದೇಹ.
ಜಾರ್ಖಂಡ್ ರಾಜ್ಯದ ಖಾರ್ಸವಾನ್‌ನಲ್ಲಿರುವ ಅರ್ಜುನ್ ಮುಂಡಾ ಕ್ರೀಡಾ ಅಕಾಡೆಮಿಯಿಂದ ಪ್ರಾರಂಭವಾದ ದೀಪಿಕಾರ ಪ್ರಯಾಣ ಚಾಂಡಿಲ್-ಗಮ್ಹರಿಯಾ ಫಾರೆಸ್ಟ್ ರೇಂಜ್ ಅನ್ನು ಸುತ್ತುವರೆದಿದೆ. ಟಾಟಾ ಆರ್ಚರಿ ಅಕಾಡೆಮಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡು ಬೆಳೆದ ಅವರಿಗೆ, ನಂತರದ ದಿನಗಳಲ್ಲಿ 'ಎರಡನೇ ಮನೆ'ಯಾಯಿತು.
ರಾಂಚಿಯಿಂದ 70 ಕಿಲೋ ಮೀಟರ್ ದೂರದಲ್ಲಿರುವ ಲೋಹರ್ದಾಗಕ್ಕೆ 2006ರಲ್ಲಿ ದೀಪಿಕಾ ತನ್ನ ನೆಚ್ಚಿನ ಸ್ನೇಹಿತೆ ಮತ್ತು ಸಹೋದರಿ (ಕಸಿನ್) ದೀಪ್ತಿ ಕುಮಾರಿಯನ್ನು ಭೇಟಿ ಮಾಡಿದ ನಂತರ ಅರ್ಚರಿ ಪಯಣ ಶುರು ಮಾಡಿದ್ದರಂತೆ.
ದೀಪಿಕಾ ಅರ್ಚರಿ ಕ್ರೀಡೆಯತ್ತಾ ದಾಪುಗಾಲಿಡಲು ತನ್ನ ಸಹೋದರಿ ದೀಪ್ತಿಯನ್ನು ಅನುಸರಿಸಿದರು. ಜೊತೆಗೆ ಅವರ ಈ ನಿರ್ಧಾರದಲ್ಲಿ ತಂದೆಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶವೂ ಅಡಗಿತ್ತಂತೆ. ತಂದೆ ಆಟೋ ರಿಕ್ಷಾ ಚಾಲಕರಾಗಿದ್ದರೆ, ತಾಯಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ರಾಂಚಿಯಿಂದ ಬಂದ ನಂತರ ದೀಪಿಕಾ ಮತ್ತು ಅವರ ಪೋಷಕರಾದ ಶಿವನಾರಾಯಣ್ ಮತ್ತು ಗೀತಾ ಮಹತೊ ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಪತ್ನಿಯಾದ ಮೀರಾ ಮುಂಡಾ ಅವರನ್ನು ಭೇಟಿಯಾಗಿ, ದೀಪಿಕಾರನ್ನು ಖಾರ್ಸವಾನ್‌ನಲ್ಲಿರುವ ಅರ್ಚರಿ ಅಕಾಡೆಮಿಗೆ ನೋಂದಣಿ ಮಾಡಿಸುವಂತೆ ಮನವಿ ಮಾಡಿಕೊಂಡರು.
ಆದರೆ ದೀಪಿಕಾಗೆ ಅವಾಗ ಕೇವಲ 12 ವರ್ಷ. ಜೊತೆಗೆ ಧನಸ್ಸು ಹಿಡಿಯುವಷ್ಟು ಶಕ್ತಿಯೂ ಅವರಿಗಿರಲಿಲ್ಲ. ಅದಕ್ಕಾಗಿ ಮೀರಾ ಮುಂಡಾ, ನಿನ್ನ ಕೈಯಲ್ಲಿ ಅದು ಸಾಧ್ಯವಿಲ್ಲ, ಧನಸ್ಸು ನಿನಗಿಂತಲೂ ಭಾರವಿದೆ ಎಂದು ದೀಪಿಕಾಗೆ ಹೇಳಿದರು. ಆದರೆ ದೀಪಿಕಾ ಪೋಷಕರು ಹೇಗೋ ಮೀರಾ ಅವರಿಗೆ ಮನವರಿಕೆ ಮಾಡಿದರು. ನಂತರ ಮೀರಾ ಅಕಾಡೆಮಿಯ ತರಬೇತುದಾರರಿಗೆ ಒಮ್ಮೆ ಟ್ರಯಲ್ಸ್ಗೆ ಅನುಮಾಡಿಕೊಡುವಂತೆ ಸೂಚಿಸಿದ್ದಾರೆ.
ತನ್ನ ತಂದೆಯೊಂದಿಗೆ ಮೋಟಾರ್‌ಸೈಕಲ್‌ನಲ್ಲಿ ಅಕಾಡೆಮಿಗೆ ತಲುಪಿದ ದೀಪಿಕಾ, ಅಲ್ಲಿಯೂ ಅಕಾಡೆಮಿ ತರಬೇತುದಾರರಾದ ಬಿ.ಶ್ರೀನಿವಾಸ್ ರಾವ್ ಮತ್ತು ಹಿಮಾಂಶು ಮೊಹಂತಿ ಅವರಿಂದ ತಿರಸ್ಕಾರ ಎದುರಿಸಬೇಕಾಯಿತು ಎಂದು ಸಾರೈಕೆಲಾ-ಖಾರ್ಸವಾನ್ ಬಿಲ್ಲುಗಾರಿಕೆ ಸಂಘದ ಕಾರ್ಯದರ್ಶಿ ಸುಮಂತ ಚಂದ್ರ ಮೊಹಂತಿ ಅವರನ್ನು ನೆನಪಿಸಿಕೊಂಡಿದ್ದಾರೆ.
ಇದರಿಂದ ಎದೆಗುಂದದ ದೀಪಿಕಾ ಮತ್ತೆ ಮುಖ್ಯಮಂತ್ರಿ ಪತ್ನಿ ಮೀರಾ ಮುಂಡಾ ಅವರನ್ನು ಭೇಟಿ ಮಾಡಿದರು. ಅಕಾಡೆಮಿಯಲ್ಲಿ ತನ್ನನ್ನು ಸಾಬೀತುಪಡಿಸಲು ಅವಳು ಮೂರು ತಿಂಗಳ ಸವಾಲನ್ನು ತೆಗೆದುಕೊಂಡಳು. ಮೀರಾ ಅವರು ಅಕಾಡೆಮಿಯವರೆಗೆ ಅಧಿಕೃತ ಪತ್ರ ಬರೆದು ದೀಪಿಕಾರನ್ನು ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದರು ಎಂದು ಮೊಹಂಟಿ ಪಿಟಿಐ ಜೊತೆಗಿನ ಸಂವಾದದ ವೇಳೆ ಹೇಳಿದರು.
ಅವಳು ತುಂಬಾ ದುರ್ಬಲಳಾಗಿದ್ದಳು. ಆದರೆ ಒಂದೇ ಒಂದು ಸಕಾರಾತ್ಮಕ ಅಂಶವೆಂದರೆ ಅವಳ ದೇಹ ರಚನೆ ಅರ್ಚರಿಗೆ ಹೇಳಿ ಮಾಡಿಸಿದಂತಿತ್ತು. ಉದ್ದ, ನೇರವಾದ ಕೈಕಾಲುಗಳು, ಪರಿಪೂರ್ಣ ಸ್ಥಿರತೆ ಅತ್ಯುತ್ತಮವಾಗಿತ್ತು ಎಂದು ರಾವ್ ತಿಳಿಸಿದ್ದಾರೆ.
"ಬಿಲ್ಲುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕಾದರೆ ದೇಹದಲ್ಲಿ ಶಕ್ತಿಯಿರಬೇಕು. ಆದರೆ ಅವಳು ಇದಕ್ಕೆ ಸಂಪೂರ್ಣ ಅಸಮರ್ಪಕವಾಗಿ ಕಾಣುತ್ತಿದ್ದಳು. ಆದರೆ ಅವಳಲ್ಲಿ ದೃಢನಿಶ್ಚಯವಿತ್ತು ಮತ್ತು ಅವಳು ನೈಜವಾಗಿ ಶ್ರಮಿವಹಿಸಿ ನಮ್ಮೆಲ್ಲರ ಆಲೋಚನೆಗಳನ್ನು ತಪ್ಪೆಂದು ನಿರೂಪಿಸಿದಳು" ಎಂದು ದೀಪಿಕಾ ಕೋಚ್ಗಳಲ್ಲಿ ಒಬ್ಬರಾದ ಹಿಮಾಂಶು ಹೇಳುತ್ತಾರೆ.
ಚಿಕ್ಕ ವಯಸ್ಸಿನಿಂದಲೂ ಕಟ್ಟುನಿಟ್ಟಿನ ಶಿಸ್ತು ಹೊಂದಿದ್ದ ದೀಪಿಕಾ ಮೊದಲು ಕ್ರೀಡಾಂಗಣಕ್ಕೆ ಬಂದು ತನ್ನ ಕಸರತ್ತುಗಳನ್ನು ಪ್ರಾರಂಭಿಸುತ್ತಿದ್ದರು. ತರಬೇತಿಯಲ್ಲಿ ಆಕೆ ನಾವು ಹೇಳಿದ್ದನ್ನು ಎರಡು ಬಾರಿ ಮಾಡುತ್ತಿದ್ದಳು. ಅವಳ ದುರ್ಬಲ ದೇಹ ರಚನೆಯ ಕ್ರೀಡೆಯನ್ನು ಸುಲಭವಾಗಿ ಬಿಟ್ಟುಕೊಡುವಂತಾಗಿತ್ತು. ಆದರೆ ಅವಳು ಮುನ್ನುಗ್ಗುತ್ತಾ, ಬೇರೆ ಕೌಶಲ್ಯಗಳನ್ನು ರೂಡಿಸಿಕೊಳ್ಳುತ್ತಾ, ಬೇರೆಯವರಿಗಿಂತ ದ್ವಿಗುಣ ಶ್ರಮ ವಹಿಸುತ್ತಿದ್ದಳೆಂದು ಅಕಾಡೆಮಿಯಲ್ಲಿ ಅವರ ಸಹೋದ್ಯೋಗಿ ಮತ್ತು ಭಾರತದ ಮಾಜಿ ಭಾರತದ ಮಾಜಿ ಕಾಂಪೌಂಡ್ ಅರ್ಚರಿ ಪಟು ಸುಮಿತ್ ಮಿಶ್ರಾ ಹೇಳಿದ್ದಾರೆ.
ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿದ ದೀಪಿಕಾ ಕುಮಾರಿ, ವಿಶ್ವದ ನಂಬರ್ 1 ಅರ್ಚರಿ ಪಟುವಾಗಿ ಟೋಕಿಯೋಗೆ ಪಯಣ ಬೆಳೆಸಿದ್ದಾರೆ. ಪತಿ ಅತನು ದಾಸ್ ಕೂಡ ಇದೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದು, ಈಗಾಗಲೇ ಈ ಜೋಡಿ ಹಲವಾರು ಟೂರ್ನಿಗಳಲ್ಲಿ ಮಿಶ್ರ ತಂಡದ ವಿಭಾಗದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ. ಇದೀಗ ಟೋಕಿಯೋದಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಲು ಸಜ್ಜಾಗಿದ್ದಾರೆ.
ದೀಪಿಕಾ ಸಾಧನೆಯ ಹಾದಿ ಹೀಗಿದೆ..
2007ರಲ್ಲಿ ಮೊದಲ ಸ್ಪರ್ಧೆ:
2007ರಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಭಾಗವಹಿಸಿದ ಅವರು ಬರಿಗೈಯಲ್ಲಿ ಹಿಂತಿರುಗಿದರು. ನಂತರ ವಿಜಯವಾಡದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರಿಗೆ ಮೊದಲ ಯಶಸ್ಸು ಸಿಕ್ಕಿತು. ಅಲ್ಲಿ ಅವರು ಚಿನ್ನದ ಪದಕ ಪಡೆದರು. ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ ಎನ್ನುತ್ತಾರೆ ಶ್ರೀನಿವಾಸ್ ರಾವ್.
ವಿಶ್ವ ಚಾಂಪಿಯನ್ಶಿಪ್
2011 ಟೊರೆಂಟೊ- ಮಹಿಳಾ ತಂಡದ ವಿಭಾಗದಲ್ಲಿ ಬೆಳ್ಳಿ
2016 ಕೋಪನ್ ಹ್ಯಾಗನ್ - ಮಹಿಳಾ ತಂಡ
ಏಷ್ಯನ್ ಅರ್ಚರಿ ಚಾಂಪಿಯನ್ಶಿಪ್
ಕಂಚಿನ ಪದಕ - ಮೂರನೇ ಸ್ಥಾನ 2019 ಬ್ಯಾಂಕಾಕ್- ಮಿಶ್ರ ತಂಡ
ಕಂಚಿನ ಪದಕ - ಮೂರನೇ ಸ್ಥಾನ 2019 ಬ್ಯಾಂಕಾಕ್- ತಂಡ
ಬೆಳ್ಳಿ ಪದಕ - ಎರಡನೇ ಸ್ಥಾನ 2015 ಬ್ಯಾಂಕಾಕ್- ರಿಕರ್ವ್ ತಂಡ
ಕಂಚಿನ ಪದಕ - ಮೂರನೇ ಸ್ಥಾನ 2015 ಬ್ಯಾಂಕಾಕ್- ಮಿಶ್ರ ತಂಡ
ಚಿನ್ನದ ಪದಕ - ಪ್ರಥಮ ಸ್ಥಾನ 2013 ತೈಪೆ -ಮಿಶ್ರ ತಂಡ
ಬೆಳ್ಳಿ ಪದಕ - ಎರಡನೇ ಸ್ಥಾನ 2011 ಟೆಹ್ರಾನ್- ರಿಕರ್ವ್ ತಂಡ
ವಿಶ್ವಕಪ್
2021 ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಚಿನ್ನ
ಕಾಮನ್ವೆಲ್ತ್ ಗೇಮ್ಸ್ 2010 ದೆಹಲಿ
ರಿಕರ್ವ್ ವೈಯಕ್ತಿಕ ಮತ್ತು ರಿಕರ್ವ್ ತಂಡದಲ್ಲಿ ಚಿನ್ನದ ಪದಕ