ನೂರ್ ಸುಲ್ತಾನ್: ಕಜಕಿಸ್ತಾನದ ನೂರ್ಸುಲ್ತಾನ್ನಲ್ಲಿ ನಡೆಯುತ್ತಿರುವ ಕುಸ್ತಿ ವಿಶ್ವಚಾಂಪಿಯನ್ಶಿಪ್ನಲ್ಲಿ ರಾಹುಲ್ ಅವಾರೆ ಕಂಚು ಗೆಲ್ಲುವ ಮೂಲಕ ಭಾರತ ತಂಡ 5 ಪದಕಗಳೊಂದಿಗೆ ಈ ಬಾರಿಯ ಚಾಂಪಿಯನ್ಶಿಪ್ ಕೊನೆಗೊಳಿಸಿದೆ.
ಭಾನುವಾರ ನಡೆದ 61ಕೆಜಿ ವಿಭಾಗದ ಪಂದ್ಯದಲ್ಲಿ ರಾಹುಲ್ 11-4 ರಲ್ಲಿ ಅಮೆರಿಕದ ಟೈಲೆರ್ ಲೀ ಅವರನ್ನು ಮಣಿಸಿ ಕಂಚಿನ ಪದಕ ಪಡೆದರು. ಈ ಮೂಲಕ 2019ರ ಚಾಂಪಿಯನ್ಶಿಪ್ನಲ್ಲಿ ಭಾರತ 5 ಪದಕಗಳೊಂದಿಗೆ ಟೂರ್ನಿಯಿಂದ ನಿರ್ಗಮಿಸಿದೆ.
ರಾಹುಲ್ಗೂ ಮೊದಲು ವಿನೇಶ್ ಫೋಗಟ್, ಭಜರಂಗ್ ಪೂನಿಯಾ, ರವಿ ಕುಮಾರ್ ಕಂಚು ಗೆದ್ದಿದ್ದರೆ, ಭಾನುವಾರ ಫೈನಲ್ನಿಂದ ಹಿಂದೆ ಸರಿದಿದ್ದ ದೀಪಕ್ ಪೂನಿಯಾ ಬೆಳ್ಳಿ ಪದಕ ಗೆದ್ದಿದ್ದರು. ಇದೀಗ ಭಾರತ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತ ಇದೇ ಮೊದಲ ಬಾರಿಗೆ 5 ಪದಕಗಳನ್ನು ಪಡೆಯುವ ಮೂಲಕ ದಾಖಲೆ ಬರೆದಿದೆ. ಈ ಮೊದಲು 2013 ರಲ್ಲಿ ಒಂದುಬೆಳ್ಳಿ ಹಾಗೂ ಎರಡು ಕಂಚು ಗೆದ್ದಿತ್ತು.
5 ಕಂಚು ಗೆದ್ದಿದ್ದಲ್ಲದೆ, ವಿನೇಶ್ ಫೋಗಟ್, ಭಜರಂಗ್ ಪೂನಿಯಾ, ರವಿ ಕುಮಾರ್ ಹಾಗೂ ದೀಪಕ್ ಪೂನಿಯಾ ಅವರವರ ವಿಭಾಗದಲ್ಲಿ 2020ರ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.