ಲಂಡನ್: ಇಲ್ಲಿ ನಡೆಯುತ್ತಿರುವ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಸ್ಲಾಮ್ 2023ರ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ನೆದರ್ಲೆಂಡ್ಸ್ ಜೋಡಿಯನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಬುಧವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಬೋಪಣ್ಣ ಜೋಡಿ, ಟ್ಯಾಲನ್ ಗ್ರಿಕ್ಸ್‌ಪುರ್ ಮತ್ತು ಬಾರ್ಟ್ ಸ್ಟೀವನ್ಸ್ ತಂಡವನ್ನು 6-7, 7-5, 6-2 ಸೆಟ್‌ಗಳಿಂದ ಪರಾಭವಗೊಳಿಸಿದರು. 43 ವಯಸ್ಸಿನ ಬೋಪಣ್ಣ 2015ರ ವಿಂಬಲ್ಡನ್‌ನಲ್ಲಿ ಕೊನೆಯ ನಾಲ್ಕರ ಘಟ್ಟ ತಲುಪಿದ್ದರು.
ಮುಂದಿನ ಸವಾಲು: 2010ರಲ್ಲಿ ಯುಎಸ್ ಓಪನ್ ರನ್ನರ್ ಅಪ್ ಆಗಿದ್ದ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ನಾಲ್ಕು ಬಾರಿ ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಆರನೇ ಶ್ರೇಯಾಂಕಿತ ಇಂಡೋ-ಆಸ್ಟ್ರೇಲಿಯನ್ ಜೋಡಿ ಇದೀಗ ಫೈನಲ್ ತಲುಪಲು ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್ ಮತ್ತು ಬ್ರಿಟನ್ ಜೋಡಿ ವೆಸ್ಲಿ ಕೂಲ್ಹೋಫ್ ಮತ್ತು ನೀಲ್ ಸ್ಕುಪ್ಸ್ಕಿ ಅವರ ಸವಾಲು ಜಯಿಸಬೇಕಿದೆ.
ಒಂದು ಗಂಟೆ 54 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೋಪಣ್ಣ ಟೀಂ ಮೊದಲ ಸೆಟ್ ಹಿನ್ನಡೆ ಸಾಧಿಸಿತು. ಆ ಬಳಿಕ ಅದ್ಭುತ ಕಮ್ಬ್ಯಾಕ್ ಮಾಡಿದರು. ಮೊದಲ ಸೆಟ್ ಅನ್ನು ಟೈ-ಬ್ರೇಕ್‌ನಲ್ಲಿ ಕಳೆದುಕೊಂಡು ಎರಡನೇ ಸೆಟ್ ಅನ್ನು ಟೈ-ಬ್ರೇಕ್‌ನಲ್ಲಿ ಗೆದ್ದುಕೊಂಡರು. ಎರಡನೇ ಸೆಟ್ ಗೆದ್ದು ಆತ್ಮವಿಶ್ವಾಸದಲ್ಲಿದ್ದ ಇಂಡೋ-ಆಸ್ಟ್ರೇಲಿಯಾ ಜೋಡಿ ಮುಂದೆ ಎದುರಾಳಿಗೆ ಯಾವುದೇ ಅವಕಾಶ ನೀಡದೆ ಮೇಲುಗೈ ಸಾಧಿಸಿತು.
ಇದಕ್ಕೂ ಮುನ್ನ ಮಂಗಳವಾರ ಬೋಪಣ್ಣ- ಮ್ಯಾಥ್ಯೂ ಎಬ್ಡೆನ್ ಜೋಡಿ ರೀಸ್ ಸ್ಟಾಲ್ಡರ್ ಮತ್ತು ಡೇವಿಡ್ ಪೆಲ್ ಜೋಡಿಯನ್ನು ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಎರಡು ಗಂಟೆ 19 ನಿಮಿಷಗಳ ಕಾಲದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಬೋಪಣ್ಣ-ಎಬ್ಡೆನ್ ಅಮೆರಿಕದ ಸ್ಟಾಲ್ಡರ್ ಮತ್ತು ನೆದರ್ಲೆಂಡ್ಸ್ ತಂಡವನ್ನು 7-5, 4-6, 7-6 (10-5) ಸೆಟ್‌ಗಳಿಂದ ಸೋಲಿಸಿದ್ದರು.
ಮಹಿಳೆಯರ ಸಿಂಗಲ್ಸ್- ಸೆಮೀಸ್‌ಗೇರಿದ ಸಬಲೆಂಕಾ : ಮತ್ತೊಂದೆಡೆ, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅರೀನಾ ಸಬಲೆಂಕಾ ಬುಧವಾರ ಮ್ಯಾಡಿಸನ್ ಕೀಸ್ ವಿರುದ್ಧ ನೇರ ಸೆಟ್‌ಗಳ ಜಯದೊಂದಿಗೆ ತನ್ನ ಎರಡನೇ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಬೆಲಾರಸ್‌ನ ಎರಡನೇ ಶ್ರೇಯಾಂಕದ ಸಬಲೆಂಕಾ ಸೆಮಿಫೈನಲ್‌ನಲ್ಲಿ ಓನ್ಸ್ ಜೆಬುರೆ ಅವರನ್ನು ಎದುರಿಸುವರು.
ಪುರುಷರ ಸಿಂಗಲ್ಸ್- ಕಾರ್ಲೋಸ್ ಅಲ್ಕರಾಜ್ ದಾಖಲೆ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ 20 ವರ್ಷದ ಸ್ಪೇನಿನ ಕಾರ್ಲೋಸ್ ಅಲ್ಕರಾಜ್ ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಹೋಲ್ಗರ್ ರೂನ್ ಅವರನ್ನು 7-6, 6-4, 6-4 ಸೆಟ್‌ಗಳಿಂದ ಸೋಲಿಸುವ ಮೂಲಕ ವಿಂಬಲ್ಡನ್‌ನಲ್ಲಿ ಸೆಮಿಫೈನಲ್ ತಲುಪಿದ ಅತ್ಯಂತ ಕಿರಿಯ ಪುರುಷ ಆಟಗಾರರಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ: ಭಾರತ vs ವೆಸ್ಟ್ ಇಂಡೀಸ್ ಮೊದಲ ಟೆಸ್ಟ್: ಅಶ್ವಿನ್ 'ಫೈವ್‌ಸ್ಟಾರ್', ನಲುಗಿದ ವಿಂಡೀಸ್