ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಮೀರಾಬಾಯಿ ಚನು ಬೆಳ್ಳಿ ಪದಕ ಗೆದ್ದಿದ್ದು 2021ರಲ್ಲಿ ಭಾರತೀಯ ವೇಟ್ಲಿಫ್ಟಿಂಗ್ನಲ್ಲಿ ಅತ್ಯಂತ ಯಶಸ್ವಿ ಕ್ಷಣವಾಗಿತ್ತು.
ಮಾಜಿ ವಿಶ್ವ ಚಾಂಪಿಯನ್ ಆಗಿದ್ದ ಚನು 2016ರ ರಿಯೋ ಒಲಿಂಪಿಕ್ಸ್ನಲ್ಲಿ ಮೂರು ಅವಕಾಶಗಳಲ್ಲೂ ವಿಫಲರಾಗಿ ಪದಕ ಗೆಲ್ಲಲಾಗದ್ದಕ್ಕೆ ಕಣ್ಣೀರಿಟ್ಟಿದ್ದರು. ಆದರೆ, ನಂತರ 5 ವರ್ಷಗಳಲ್ಲಿ ಸಾಕಷ್ಟು ಪರಿಶ್ರಮದಿಂದ ತರಬೇತಿ ಪಡೆದು ಕೊನೆಗೆ ಐತಿಹಾಸಿಕ ಬೆಳ್ಳಿ ಪದಕ ಪಡೆಯುವ ಮೂಲಕ ಭಾರತೀಯ ಯುವ ಅಥ್ಲೀಟ್ಗಳಲ್ಲಿ ವೇಟ್ಲಿಫ್ಟಿಂಗ್ ಕಡೆಗೆ ಆಸಕ್ತಿವಹಿಸುವಂತೆ ಮಾಡಿದರು.
ಕೋವಿಡ್ನಿಂದ ಟೋಕಿಯೋ ಗೇಮ್ಸ್ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಾಗ ಒಲಿಂಪಿಕ್ಸ್ಗಾಗಿ ಮೀರಾಬಾಯಿ ಮಾಡಿಕೊಂಡಿದ್ದ ಯೋಜನೆಗಳೆಲ್ಲವೂ ಉಲ್ಟಾ ಆಗಿದ್ದವು. ಆದರೆ, ಇಂತಹ ಹಲವಾರು ಹಿನ್ನಡೆಗಳನ್ನು ಮಣಿಸಿ ಮುಂದೆ ಸಾಗವುದನ್ನು ಅರಿತಿದ್ದ ಅವರೂ ಏಪ್ರಿಲ್ನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದು ಮಿಂಚಿದ್ದರು.
ಕ್ಲೀನ್ ಅಂಡ್ ಜರ್ಕ್ನಲ್ಲಿ 119 ಕೆಜಿ ಭಾರ ಎತ್ತುವ ಮೂಲಕ ಅವರೂ ಇದೇ ಚಾಂಪಿಯನ್ಶಿಪ್ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿದ್ದ ಚೀನಾ ವೇಟ್ ಲಿಫ್ಟರ್ಗಳನ್ನು ಹಿಂದಿಕ್ಕಿ ವಿಶ್ವದಾಖಲೆ ಬರೆದಿದ್ದರು.
ಏಷ್ಯನ್ ಗೇಮ್ಸ್ ಹೊರತುಪಡಿಸಿ ಎಲ್ಲ ದೊಡ್ಡ ಟೂರ್ನಮೆಂಟ್ನಲ್ಲಿ ಪದಕಗಳನ್ನು ಗೆದ್ದಿರುವ ಚನುಗೆ ಈ ವರ್ಷವು ಉತ್ತಮವಾಗಿತ್ತು. ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದ ಅವರು ಅದೇ ವಿಶ್ವಾಸದಲ್ಲಿ ಟೋಕಿಯೋಗೆ ತೆರಳಿದ್ದರು. ಒಲಿಂಪಿಕ್ಸ್ಗೆ ತೆರಳಿದ್ದ ಅಷ್ಟು ಭಾರತೀಯ ಅಥ್ಲೀಟ್ಗಳಲ್ಲಿ ಮೀರಾಬಾಯಿ ಭಾರತದ ಪದಕ ಗೆದ್ದು ಕೊಡುವ ದೊಡ್ಡ ಭರವಸೆ ಮೂಡಿಸಿದ್ದರು.
ಕೊನೆಗೆ 49 ಕೆಜಿ ವಿಭಾಗದಲ್ಲಿ ಟೋಕಿಯೋದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಕೋಟ್ಯಂತರ ಭಾರತೀಯರ ಮನೆ ಮಾತಾದರು. ಅವರು ಒಟ್ಟು 202 ಕೆಜಿ ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದ್ದರು. ಈ ಮೂಲಕ ವೇಟ್ ಲಿಫ್ಟಿಂಗ್ನಲ್ಲಿ ಬರೋಬ್ಬರಿ 20 ವರ್ಷಗಳ ಒಲಿಂಪಿಕ್ ಪದಕದ ಕಾಯುವಿಕೆ ಕೊನೆಗಾಣಿಸಿದ್ದರು. 2000ದಲ್ಲಿ ಕರ್ಣಂ ಮಲ್ಲೇಶ್ವರಿ ಸಿಡ್ನಿ ಒಲಿಂಪಿಕ್ಸ್ನಲ್ಲಿ ಗೆದ್ದಿದ್ದ ಕಂಚಿನ ಪದಕ ಈ ವಿಭಾಗದಲ್ಲಿ ಭಾರತಕ್ಕೆ ಬಂದಿದ್ದ ಏಕೈಕ ಪದಕವಾಗಿತ್ತು.
ಮೀರಾಬಾಯಿ ಹೊರೆತುಪಡಿಸಿದರೆ ಈ ಕ್ರೀಡೆಗೆ 2021ರ ವರ್ಷ ಅಷ್ಟೇನು ಮಹತ್ವದ್ದಾಗಿಲ್ಲ. ಅವರೂ ಭಾರತದ ಏಕೈಕ ವೇಟ್ಲಿಫ್ಟರ್ ಆಗಿ ಒಲಿಂಪಿಕ್ಸ್ ಪ್ರವೇಶಿಸಿದರು, ಆದರೆ ಅವರು ಪದಕ ಗೆದ್ದಿದ್ದು ಹಲವಾರು ಯುವ ಲಿಫ್ಟರ್ಗಳಿಗೆ ಪ್ರೇರಣೆಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪುರುಷರ ವಿಭಾಗದಲ್ಲಿ ಭಾರತದ ಭವಿಷ್ಯವಾಗಿದ್ದ ಜೆರೆಮಿ ಲಾಲ್ರಿನ್ನುಂಗಾ ಗಾಯದ ಕಾರಣ ಒಲಿಂಪಿಕ್ಸ್ ಪ್ರವೇಶಿಸುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು. 2018ರ ಯೂತ್ ಒಲಿಂಪಿಕ್ಸ್ನಲ್ಲಿ ಚಾಂಪಿಯನ್ ಈ ವರ್ಷ ನಡೆದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದು ವೇಟ್ಲಿಫ್ಟಿಂಗ್ಗೆ ಸಮಾಧಾನಕರ ಸಂಗತಿಯಾಗಿದೆ.
ಈ ಪದಕದೊಂದಿಗೆ ಜೆರೆಮಿ 2022ರ ಬರ್ಮಿಂಗಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ಗೆ ಅರ್ಹತೆ ಪಡೆದಿದ್ದಾರೆ. ಇವರ ಜೊತೆಗೆ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ 73 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದ ಅಚಿಂತ ಸುಯೇಲಿ ಕೂಡ ಅವಕಾಶ ಪಡೆದಿದ್ದಾರೆ.
ಇನ್ನು ಭಾರತೀಯ ಲಿಫ್ಟರ್ಸ್ ಕಾಮನ್ವೆಲ್ತ್ ಚಾಂಪಿಯನ್ಶಿಪ್ನಲ್ಲಿ ಹಲವಾರು ರಾಷ್ಟ್ರೀಯ ದಾಖಲೆಗಳನ್ನು ಬ್ರೇಕ್ ಮಾಡಿ 18 ಪದಕಗಳನ್ನು ಗೆದ್ದಿರುವುದು ಭವಿಷ್ಯದಲ್ಲಿ ವಿಶ್ವ ಮಟ್ಟದ ಟೂರ್ನಿಯಲ್ಲಿ ದೇಶಕ್ಕೆ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ.
ಇದನ್ನೂ ಓದಿ:2021ರ ಸವಿನೆನಪು : ಹಾಕಿಗೆ ಮರುಜೀವ ತುಂಬಿದ ಟೋಕಿಯೋ ಒಲಿಂಪಿಕ್ಸ್ ಮೆಡಲ್