ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಅಶಿಸ್ತಿನಿಂದ ವರ್ತಿಸಿದ ಕಾರಣ ಭಾರತ ಕುಸ್ತಿ ಒಕ್ಕೂಟ(WFI)ದಿಂದ ಅಮಾನತುಗೊಂಡಿರುವ ಮಹಿಳಾ ಕುಸ್ತಿಪಟು ತಮ್ಮ ತಪ್ಪಿಗೆ ಒಕ್ಕೂಟಕ್ಕೆ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೂ ಕುಸ್ತಿ ಒಕ್ಕೂಟ ಅವರನ್ನು ಮುಂಬರುವ ವಿಶ್ವಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಲು ಅನುಮತಿ ನೀಡುವುದು ಅನುಮಾನ ಎನ್ನಲಾಗುತ್ತಿದೆ.
ವಿನೇಶ್ ಫೋಗಟ್ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕ್ವಾರ್ಟರ್ ಫೈನಲ್ನಲ್ಲಿ ಸೋಲುಕಂಡು ಹೊರಬಿದ್ದಿದ್ದರು. ಇದಕ್ಕೂ ಮುನ್ನ ಹಂಗೇರಿಯಿಂದ ಬಂದಿದ್ದ ಅವರು ಟೋಕಿಯೋದಲ್ಲಿ ಭಾರತೀಯ ಕುಸ್ತಿಪಟುಗಳೊಂದಿಗೆ ಉಳಿಯುುವುದಕ್ಕೆ ಮತ್ತು ಅವರ ಜೊತೆ ತರಬೇತಿ ಮಾಡಲು ನಿರಾಕರಿಸಿ ಅಶಿಸ್ತಿನಿಂದ ವರ್ತಿಸಿದ್ದರು. ಅಷ್ಟೇ ಅಲ್ಲದೆ ಭಾರತೀಯ ಕ್ರೀಡಾಪಟುಗಳ ಅಧಿಕೃತ ಪ್ರಯೋಜಕರ ಲೋಗೋ ಇರುವ ಜರ್ಸಿಯ ಬದಲು ತಮ್ಮ ವೈಯಕ್ತಿಕ ಪ್ರಾಯೋಜಕರ ಲೋಗೋ ಇರುವ ಜರ್ಸಿಯನ್ನು ತೊಟ್ಟು ಆಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದ ಭಾರತ ಕುಸ್ತಿ ಒಕ್ಕೂಟ(ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ) ಆಗಸ್ಟ್ 10ರಂದು ಅಮಾನತು ಮಾಡಿ ಆದೇಶ ಹೊರಡಿಸಿತ್ತು.
ಆದರೆ ತಮ್ಮನ್ನು ಅಮಾನತು ಮಾಡಿದ ಮರು ದಿನ ಪ್ರತಿಕ್ರಿಯಿಸಿದ್ದ ವಿನೇಶ್ ತಾವೂ ಟೋಕಿಯೋ ಒಲಿಂಪಿಕ್ಸ್ ವೇಳೆ ಮಾನಸಿಕ ಆರೋಗ್ಯದ ಸಮಸ್ಯೆ ಮತ್ತು ವೈಯಕ್ತಿಕ ಫಿಸಿಯೋ ಎದುರಿಸಿದ್ದೆ ಎಂದು ತಮ್ಮ ವರ್ತನೆಗೆ ಕಾರಣ ತಿಳಿಸಿದ್ದರು. ಇದೀಗ ಶುಕ್ರವಾರ ಕುಸ್ತಿ ಒಕ್ಕೂಟ ನೀಡಿದ್ದ ನೋಟೀಸ್ಗೆ ಉತ್ತರಿಸಿದ್ದು, ಕ್ಷಮೆಯಾಚನೆ ಮಾಡಿದ್ದಾರೆಂದು ತಿಳಿದುಬಂದಿದೆ.
"ಭಾರತೀಯ ಕುಸ್ತಿ ಒಕ್ಕೂಟ ವಿನೇಶ್ ಅವರಿಂದ ಉತ್ತರವನ್ನು ಸ್ವೀಕರಿಸಿದೆ ಮತ್ತು ಕುಸ್ತಿಪಟು ಕ್ಷಮೆಯಾಚನೆ ಮಾಡಿದ್ದಾರೆ" ಎಂದು ಬೆಳವಣಿಗೆಯ ಬಗ್ಗೆ ತಿಳಿದಿರುವ ಫೆಡರೇಷನ್ ಮೂಲ ಪಿಟಿಐಗೆ ಮಾಹಿತಿ ನೀಡಿದ್ದಾರೆ. "ಆದರೆ ಕ್ಷಮೆಯಾಚನೆಯ ಹೊರತಾಗಿಯೂ, ಆಕೆಗೆ ಇನ್ನೂ ವಿಶ್ವ ಚಾಂಪಿಯನ್‌ಶಿಪ್‌ಗೆ ಪ್ರಯಾಣಿಸಲು ಅವಕಾಶ ನೀಡುವ ಸಾಧ್ಯತೆ ಕಡಿಮೆ" ಎಂದು ಮೂಲಗಳು ತಿಳಿಸಿವೆ.
ಭಾರತೀಯ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವ ನೀಡಿರುವ OGQ ಮತ್ತು JSW ನಂತಹ ಖಾಸಗಿ ಕ್ರೀಡಾ ಎನ್ಜಿಒಗಳು ಭಾರತೀಯ ಕುಸ್ತಿಪಟುಗಳನ್ನು ನಿಭಾಯಿಸುತ್ತಿರುವ ರೀತಿಗೆ WFI ತೃಪ್ತಿ ಹೊಂದಿಲ್ಲ. ಈ ಕುರಿತು WFI ಸೋಮವಾರ ಅಥವಾ ಮಂಗಳವಾರ ಸಭೆ ನಡೆಸಿ, ವಿನೇಶ್ ಸೇರಿದಂತೆ ಇತರೆ 3 ಕುಸ್ತಿಪಟುಗಳ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಒಲಿಂಪಿಕ್ಸ್ ವೇಳೆ ಅಶಿಸ್ತಿನ ವರ್ತನೆ : ವಿನೇಶ್ ಫೋಗಟ್ರನ್ನು ಅಮಾನತು ಮಾಡಿದ WFI