ಟೋಕಿಯೋ: ಭಾರತಕ್ಕೆ ಮಂಗಳವಾರ ಹೈಜಂಪ್ನಲ್ಲಿ ಬೆಳ್ಳಿ ತಂದುಕೊಟ್ಟಿರುವ ಮರಿಯಪ್ಪನ್ ತಂಗವೇಲು ಅವರ ಸಾಧನೆಯನ್ನು ಕನ್ನಡಿಗರೂ ಕೂಡ ಸಂಭ್ರಮಿಸಬೇಕಾಗಿದೆ. ಏಕೆಂದರೆ ಅವರು ಎರಡೂ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲು ಕನ್ನಡಿಗರಾದ ಸತ್ಯನಾರಾಯಣ ಅವರು ತರಬೇತಿ ನೀಡಿರುವುದು ಸಂತೋಷದ ಸಂಗತಿಯಾಗಿದೆ.
ಟೋಕಿಯೋದಲ್ಲಿ ಪುರುಷರ ಹೈಜಂಪ್ T63 ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಗೆಲ್ಲುವ ಮೂಲಕ ಭಾರತಕ್ಕೆ 9ನೇ ಪದಕ ತಂದುಕೊಟ್ಟರು. ತಂಗವೇಲು 2016ರ ರಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಶರದ್ ಕುಮಾರ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಅಮೆರಿಕದ ಸ್ಯಾಮ್ ಗ್ರೇವ್ ಚಿನ್ನದ ಪದಕ ಪಡೆದಿದ್ದರು.
ಪದಕ ಗೆದ್ದ ನಂತರ ಕನ್ನಡದಲ್ಲೇ ಮಾತನಾಡಿದರುವ ತಂಗವೇಲು, ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಸತ್ಯನಾರಾಯಣ ಸರ್ ಅವರ ಕೋಚಿಂಗ್ನಲ್ಲಿ ನಾನು ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆದಿದ್ದೆ. ಈ ಸಾರಿಯೂ ಪದಕ ಗೆದ್ದಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ನಂತರ ಮಾತನಾಡಿದ ಕೋಚ್ ಸತ್ಯನಾರಾಯಣ, ಮರಿಯಪ್ಪನ್ ಪದಕ ಗೆದ್ದಿರುವುದು ನನಗೆ ತುಂಬಾ ಖುಷಿಯಾಗಿದೆ. ಏಕೆಂದರೆ ಇದು ನನ್ನ ಕೋಚಿಂಗ್ನಲ್ಲಿ ಪದಕ ಗೆಲ್ಲುತ್ತಿರುವ ನಾಲ್ಕನೇ ಸ್ಪರ್ಧಿ. ಅದರಲ್ಲೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ನನಗೆ ತುಂಬಾ ಹೆಮ್ಮೆಯಿದೆ. ಈ ಹಿಂದೆ ಹೆಚ್.ಎಂ. ಗಿರೀಶ್(2012), ವಳಲು ಭಾಟಿ, ಮರಿಯಪ್ಪನ್ ಸೇರಿದಂತೆ ಎಲ್ಲಾ ಹೈ ಜಂಪರ್ಸ್ ತುಂಬಾ ಉತ್ತಮ ಪ್ರದರ್ಶನ ತೋರಿದ್ದಾರೆ.
ಟೋಕಿಯೋದಲ್ಲಿ ಮರಿಯಪ್ಪನ್ರಿಂದ ಚಿನ್ನದ ನಿರೀಕ್ಷೆಯಿತ್ತು
ಟೋಕಿಯೋದಲ್ಲಿ ಮರಿಯಪ್ಪನ್ರಿಂದ ಚಿನ್ನದ ಪದಕ ನಿರೀಕ್ಷೆ ಮಾಡಿದ್ದೆ, ಆದರೆ ಮಳೆ ಬಂದು ಆತನಿಗೆ ಅನಾನುಕೂಲ ಮಾಡಿತು. ಆದರೂ ಅವನು ಅತ್ಯುತ್ತಮ ಪ್ರದರ್ಶನ ನೀಡಿದ್ದಾನೆ. ಮರಿಯಪ್ಪ ಬೆಂಗಳೂರಿನ ಭಾರತೀಯ ಕ್ರೀಡಾಪ್ರಾಧಿಕಾರದಲ್ಲಿ ತರಬೇತಿ ಪಡೆದಿದ್ದಾರೆ. ರೀಯೋ ಸಂದರ್ಭದಲ್ಲೂ ಬೆಂಗಳೂರಿನಲ್ಲೇ ತರಬೇತಿ ಪಡೆದಿದ್ದರು. ಕರ್ನಾಟಕದವರೂ ಕೂಡ ಎಲ್ಲ ಸ್ನೇಹಿತರೂ ಮರಿಯಪ್ಪನ್ಗೆ ತುಂಬಾ ಬೆಂಬಲ ನೀಡಿದ್ದಾರೆ. ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಸತ್ಯನಾರಾಯಣ ಅವರು ಈಟಿವಿ ಭಾರತಕ್ಕೆ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:ಮಳೆ ಚಿನ್ನದ ಪದಕದ ಕನಸು ಹಾಳು ಮಾಡಿತು: ಬೆಳ್ಳಿ ಗೆದ್ದ ಮರಿಯಪ್ಪನ್ ತಂಗವೇಲು