ನವದೆಹಲಿ: ಕ್ರೀಡಾ ಜಗತ್ತಿನಲ್ಲಿ ಅತ್ಯುನ್ನತ ಕ್ರೀಡಾ ಸ್ಪರ್ಧೆಯಾದ ಒಲಿಂಪಿಕ್ಸ್‌ನಲ್ಲಿ ಭಾರತದ ಹಿಂದಿನ ಸಾಧನೆ ಹೇಳಿಕೊಳ್ಳುವಷ್ಟಿಲ್ಲ. ಭಾರತದಂತಹ 140 ಕೋಟಿ ಜನಸಂಖ್ಯೆ ಹೊಂದಿರುವ ರಾಷ್ಟ್ರ ಒಲಿಂಪಿಕ್ ಇತಿಹಾಸದಲ್ಲಿ ಗೆದ್ದಿರುವುದು ಕೇವಲ 28 ಪದಕ. ಆದರೂ ವರ್ಷದಿಂದ ವರ್ಷಕ್ಕೆ ಎಲ್ಲ ಕ್ರೀಡೆಯಲ್ಲೂ ಭಾರತದ ಕ್ರೀಡಾಪಟುಗಳು ತಮ್ಮ ಪ್ರದರ್ಶನ ಮಟ್ಟವನ್ನು ಉತ್ತಮಗೊಳಿಸ್ತಿರೋದು ಸಮಾಧಾನಕರ ಸಂಗತಿ.
2020ರಲ್ಲಿ ಮುಂದೂಡಲ್ಪಟ್ಟಿರುವ ಈ ವರ್ಷದ ಜುಲೈನಲ್ಲಿ ಜಪಾನ್ ಆತಿಥ್ಯದಲ್ಲಿ ಬೇಸಿಗೆ ಒಲಿಂಪಿಕ್ ನಡೆಯಲಿದೆ. ಭಾರತ ಒಟ್ಟಾರೆ 24 ಬೇಸಿಗೆ ಒಲಿಂಪಿಕ್ನಲ್ಲಿ ಭಾಗವಹಿಸಿದ್ದು, ಒಟ್ಟು 28 ಪದಕಗಳನ್ನು ಗೆದ್ದಿದೆ. ಇದರಲ್ಲಿ 9 ಚಿನ್ನ, 7 ಬೆಳ್ಳಿ, 12 ಕಂಚಿನ ಪದಕಗಳು ಸೇರಿವೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕೇವಲ 2 ಪದಕಕ್ಕೆ ಭಾರತ ತೃಪ್ತಿಪಟ್ಟುಕೊಂಡಿತ್ತು. ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಬೆಳ್ಳಿ, ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚು ಗೆದ್ದಿದ್ದರು. ನೂರು ಕೋಟಿಗೂ ಹೆಚ್ಚು ಜನರಿರುವ ಭಾರತಕ್ಕೆ ಸಿಕ್ಕಿದ್ದು ಕೇವಲ 2 ಪದಕ ಎಂಬುದೇ ನಿರಾಶಾದಾಯಕ ವಿಷಯವೇ ಸರಿ.
ಆದರೆ, 2016 ರಲ್ಲಿ ಭಾರತೀಯ ಆಟಗಾರರು ಹೆಚ್ಚು ಪದಕಗಳಿಸಲಿಲ್ಲ ಎಂಬ ನಿರಾಸೆಯಿಂದ ಹೊರಬಂದು 2021ರ ಒಲಿಂಪಿಕ್ನಲ್ಲಿ ಹೆಚ್ಚು ಪದಕ ಗೆಲ್ಲಬೇಕೆಂಬ ನಿರೀಕ್ಷೆ ಇದ್ದು, ಕ್ರೀಡಾ ಇಲಾಖೆ, ಭಾರತೀಯ ಕ್ರೀಡಾ ಪ್ರಾಧಿಕಾರ ವಿಶೇಷ ಯೋಜನೆಗಳ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿದೆ. ಪ್ರಸ್ತುತ ಪ್ರದರ್ಶನದ ಆದಾರದ ಮೇಲೆ ಈ ಕೆಳಕಂಡ ಕ್ರೀಡಾಪಟುಗಳ ಮೇಲೆ ನಾವು ಪದಕ ನಿರೀಕ್ಷೆಯನ್ನಿಟ್ಟು ಕೊಳ್ಳಬಹುದಾಗಿದೆ.
1.ಪಿವಿ ಸಿಂಧು-ಬ್ಯಾಡ್ಮಿಂಟನ್
ಹೈದರಾಬಾದ್ನ ಪಿವಿ ಸಿಂಧು ತನ್ನ 21 ವಯಸ್ಸಿನಲ್ಲಿ 2016ರ ರಿಯೋ ಒಲಿಂಪಿಕ್ನಲ್ಲಿ ಬೆಳ್ಳಿಪದಕ ಗೆದ್ದಿದ್ದರು. ಕಳೆದ 4-5 ವರ್ಷಗಳಿಂದ ಬ್ಯಾಡ್ಮಿಂಟನ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಈಗಾಗಲೇ 2019ರಲ್ಲಿ ವಿಶ್ವ ಚಾಂಪಿಯನ್ಶಿಪ್ ಗೆದ್ದು ಭಾರತಕ್ಕೆ ಗೌರವ ತಂದುಕೊಟ್ಟಿದ್ದಾರೆ. 7ನೇ ಶ್ರೇಯಾಂಕದ ಸಿಂಧು 2021ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡಬಲ್ಲ ಕ್ರೀಡಾಪಟುಗಳಲ್ಲಿ 26ರ ಹರೆಯದ ಸಿಂಧು ಮೊದಲ ಸ್ಥಾನದಲ್ಲಿದ್ದಾರೆ.
2.ಅಮಿತ್ ಪಂಘಲ್: ಬಾಕ್ಸಿಂಗ್
ಬಾಕ್ಸಿಂಗ್ ವಿಭಾಗದಲ್ಲಿ ಈಗಾಗಲೇ ವಿಜೇಂದರ್ ಸಿಂಗ್, ಮೇರಿ ಕೋಮ್ ಭಾರತಕ್ಕೆ ಪದಕ ತಂದುಕೊಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇದೀಗ ಯುವ ಬಾಕ್ಸರ್ ಅಮಿತ್ ಪಂಘಲ್ ಮೇಲೆ ಪದಕ ನಿರೀಕ್ಷೆ ಮಾಡಲಾಗಿದೆ. ಪಂಘಲ್ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ರಿಯೋ ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ 2018ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಗೆದ್ದಾಗ ಅವರ ಮೇಲಿನ ಭರವಸೆ ಹೆಚ್ಚಾಗಿದೆ.
3. ವಿನೇಶ್ ಪೋಗಟ್- ಕುಸ್ತಿ
ರಿಯೋ ಒಲಿಂಪಿಕ್ಸ್‌ನಲ್ಲಿ ಗಾಯದ ಕಾರಣ ಪದಕ ತಪ್ಪಿಸಿಕೊಂಡ ಪೋಗಟ್, ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್ಗೆ ಅರ್ಹತೆಗಿಟ್ಟಿಸಿಕೊಂಡಿದ್ದರು. ನಂತರ ಸತತ ನಾಲ್ಕೈದು ಮೇಜರ್ ಟೂರ್ನಿಗಳಲ್ಲಿ ಚಿನ್ನದ ಪದಕ ಪಡೆದಿದ್ದಾರೆ. 2019ರಲ್ಲೇ ವಿವಿಧ ಟೂರ್ನಿಗಳಲ್ಲಿ 4 ಚಿನ್ನದ ಪದಕ ಪಡೆದಿದ್ದಾರೆ. ಪೋಗಟ್ 2018ರಲ್ಲಿ ಏಷ್ಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಹಾಗಾಗಿ ಇವರಿಂದ ಭಾರತ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಇರಿಸಿಕೊಳ್ಳಬಹುದಾಗಿದೆ.
4. ಮೇರಿ ಕೋಮ್(ಬಾಕ್ಸಿಂಗ್)
6 ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಭಾರತದ ಶ್ರೇಷ್ಠ ಬಾಕ್ಸರ್ ಮೇರಿ ಕೋಮ್ ಬಾಗಶಃ ಇದು ಕೊನೆಯ ಒಲಿಂಪಿಕ್ಸ್ ಆಗಿದೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಮೇರಿ ತಮ್ಮ ವೃತ್ತಿ ಜೀವನದಲ್ಲಿ ಚಿನ್ನದ ಪದಕ ಮುತ್ತಿಡಬೇಕೆಂಬ ಮಹಾದಾಸೆ ಹೊಂದಿದ್ದಾರೆ. 38 ವರ್ಷವಾಗಿದ್ದರೂ ಯುವ ಬಾಕ್ಸರ್ಗಳನ್ನು ಮಣ್ಣು ಮುಕ್ಕಿಸುವ ತಾಕತ್ತನ್ನು ಹೊಂದಿರುವ ಮೇರಿ ಕೋಮ್ 2019ರ ವಿಶ್ವ ಚಾಂಪಿಯನ್ಶಿಪ್ನಲ್ಲೂ ಕಂಚಿನ ಪದಕ ಪಡೆದಿದ್ದರು.
5.ಎಲವೆನಿಲ್ ವಲರಿವನ್ -(ಶೂಟಿಂಗ್)
ಭಾರತದ ಭರವಸೆಯ ಶೂಟರ್ ವಲರಿವನ್ ತಮ್ಮ ಚಿಕ್ಕವಯಸ್ಸಿಗೆ ಅಮೋಘ ಪ್ರದರ್ಶನ ತೋರಿ ಒಲಿಂಪಿಕ್ಸ್ ಟಿಕೆಟ್ ಪಡೆದಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ ಗಗನ್ ನಾರಂಗ್ ಗರಡಿಯಲ್ಲಿ ಪಳಗಿರುವ ಯುವ ಶೂಟರ್ ಒಲಿಂಪಿಕ್ಸ್ ಪದಕಕ್ಕೆ ಗುರಿಯಿಡಲು ಸಜ್ಜಾಗಿದ್ದಾರೆ. ಈಗಾಗಲೆ 2 ವಿಶ್ವಕಪ್ನಲ್ಲಿ ಪದಕ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.
ಇವರಲ್ಲದೇ ಯುವ ಶೂಟರ್ಗಳಾದ ಮನು ಬಾಕರ್, ಸೌರಭ್ ಚೌದರಿ, ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ ವೇಯ್ಟ್ ಲಿಫ್ಟರ್ ಮೀರಾಬಾಯಿ ಚಾನು, ಟೇಬಲ್ ಟೆನ್ನಿಸ್ನಲ್ಲಿ ಜಿ ಸತಿಯಾನ್ ಸೇರಿದಂತೆ ಕೆಲವು ಕ್ರೀಡಾಪಟುಗಳು ಭರವಸೆ ಮೂಡಿಸಿದ್ದಾರೆ. ಅಲ್ಲದೇ 9 ಬಾಕ್ಸರ್ಗಳು ಕೂಡ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದು ಅವರ ಸಾಮರ್ಥ್ಯವನ್ನು ಕಡೆಗಣಿಸುವಂತಿಲ್ಲ.