ನವದೆಹಲಿ: ಶುಕ್ರವಾರ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಉದ್ಘಾಟನೆಯಾಗುತ್ತಿದ್ದು, ಭಾರತೀಯ ಕ್ರೀಡಾಪಟುಗಳು ಮೊದಲ ದಿನದಂದಲೇ ಕಣಕ್ಕಿಳಿಯುತ್ತಿದ್ದಾರೆ. ಗುರುವಾರ ಭಾರತೀಯ ಒಲಿಂಪಿಕ್ಸ್ ಸಂಘ(IOA) ಕ್ರೀಡಾಕೂಟದಲ್ಲಿ ಪದಕ ಗೆದ್ದವರಿಗೆ ನಗುದು ಬಹುಮಾನ ಘೋಷಿಸಿದೆ.
ಟೋಕಿಯೋ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದವರಿಗೆ 75 ಲಕ್ಷ, ಬೆಳ್ಳಿ ಗೆದ್ದವರಿಗೆ 40 ಲಕ್ಷ ಮತ್ತು ಕಂಚು ಗೆದ್ದವರಿಗೆ 25 ಲಕ್ಷ ರೂ ಬಹುಮಾನ ನೀಡುವುದಾಗಿ IOA ಸಲಹಾ ಸಮಿತಿ ಘೋಷಣೆ ಮಾಡಿದೆ.
ಅಲ್ಲದೆ ಒಲಿಂಪಿಕ್ಸ್ನಲ್ಲಿ ಭಾಗವಹಿಸಿರುವ ಎಲ್ಲಾ 120ಕ್ಕೂ ಹೆಚ್ಚು ಕ್ರೀಡಾಪಟುಗಳಿಗೂ ತಲಾ ಒಂದು ಲಕ್ಷರೂಗಳನ್ನು ನೀಡುವುದಾಗಿ ಐಒಎ ತಿಳಿಸಿದೆ.
ಪ್ರಶಸ್ತಿ ಗೆಲ್ಲುವ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (National Sports Federations) ಬೋನಸ್ ಆಗಿ 30 ಲಕ್ಷ ರೂ ಮತ್ತು ಒಲಿಂಪಿಕ್ಸ್ನಲ್ಲಿ ಭಾಗವಹಿಸಿರುವ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ತಲಾ 25 ಲಕ್ಷ ರೂ ಗಳನ್ನು ನೀಡಬೇಕೆಂದು ಸಲಹಾ ಸಮಿತಿ ಸಲಹೆ ನೀಡಿದೆ. ಇನ್ನು ಇತರೆ ರಾಷ್ಟ್ರೀಯ ಒಕ್ಕೂಟಗಳಿಗೆ ತಲಾ 15 ಲಕ್ಷ ರೂಗಳನ್ನು ನೆರವು ಪಡೆಯಲಿವೆ.
"ಇದೇ ಮೊದಲ ಬಾರಿಗೆ ಐಒಎ ಪದಕ ವಿಜೇತರಿಗೆ ಮತ್ತು ಪದಕ ಗೆಲ್ಲಲು ನೆರವಾದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಬಹುಮಾನ ನೀಡುತ್ತಿದೆ" ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.
ಇದನ್ನೂ ಓದಿ: Tokyo Olympics: ಉದ್ಘಾಟನಾ ದಿನ ಕಣಕ್ಕಿಳಿಯಲಿದ್ದಾರೆ ದೀಪಿಕಾ ಕುಮಾರಿ, ಅತನು ದಾಸ್