ಟೋಕಿಯೊ: ಪ್ರಸಿದ್ಧ ಮಹಿಳಾ ಸೆಲೆಬ್ರಿಟಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಟೋಕಿಯೊ ಒಲಿಂಪಿಕ್ಸ್ ಸೃಜನಶೀಲ ನಿರ್ದೇಶಕ ಹಿರೋಷಿ ಸಾಸಾಕಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಸಭೆಗಳಲ್ಲಿ ಮಹಿಳಾ ಸೆಲೆಬ್ರಿಟಿಗಳ ಬಗ್ಗೆ ಕೀಳಾಗಿ ಮಾತನಾಡಿದ ಹಿರೋಷಿ ಸಾಸಾಕಿ ರಾಜೀನಾಮೆ ನೀಡಬೇಕು ಎಂದು ಟೋಕಿಯೊ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ ಒತ್ತಾಯಿಸಿದ್ದರು. ಇಂದು ಸಂಘಟನಾ ಸಮಿತಿಯ ಅಧ್ಯಕ್ಷರಾದ ಸೀಕೊ ಹಶಿಮೊಟೊ ಅವರಿಗೆ ಹಿರೋಷಿ ಸಾಸಾಕಿ ರಾಜೀನಾಮೆ ನೀಡಿದ್ದಾರೆ.
ನವೋಮಿ ವಟನಾಬೆ ಅವರಿಗೆ ನನ್ನ ಆಲೋಚನೆ ಮತ್ತು ಕಾಮೆಂಟ್‌ಗಳಿಂದ ದೊಡ್ಡ ಅವಮಾನವಾಗಿದೆ ಮತ್ತು ಇದು ಕ್ಷಮಿಸಲಾಗದು. ಇದಕ್ಕಾಗಿ ನಾನು ನನ್ನ ತೀವ್ರ ವಿಷಾದ ಸೂಚಿಸುತ್ತೇನೆ. ಜೊತೆಗೆ ನನ್ನ ಹೃದಯದ ಆಳದಿಂದ ಅವರಿಗೆ ಕ್ಷಮೆಯಾಚಿಸುತ್ತೇನೆ ಎಂದು ಹಿರೋಷಿ ಸಾಸಾಕಿ ಹೇಳಿದ್ದಾರೆ.
ಜುಲೈ 23 ರಂದು ಪ್ರಾರಂಭವಾಗಲಿರುವ ಒಲಿಂಪಿಕ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳ ಉಸ್ತುವಾರಿಯನ್ನು ಸಾಸಾಕಿ ವಹಿಸಿದ್ದರು. ಕಳೆದ ವರ್ಷ ಸಾಸಾಕಿ, ಯೋಜನಾ ಸಿಬ್ಬಂದಿಗೆ ಪ್ರಸಿದ್ಧ ನವೋಮಿ ವಟನಾಬೆ ಸಮಾರಂಭದಲ್ಲಿ "ಒಲಂಪಿಗ್" ಆಗಿ ಪ್ರದರ್ಶನ ನೀಡಬಹುದೆಂದು ಹೇಳಿದ್ದರು.