ಬಿಡಬ್ಲ್ಯುಎಫ್ ಜೂನಿಯರ್ ರ‍್ಯಾಂಕಿಂಗ್‌ನಲ್ಲಿ 19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಯುವ ಶಟ್ಲರ್ ತಸ್ನಿಮ್ ಮಿರ್ ಅವರು ವಿಶ್ವದ ನಂಬರ್ 1 ಸ್ಥಾನವನ್ನು ಪಡೆದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ U-19 ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗುಜರಾತ್ ಮೂಲದ ತಸ್ನಿಮ್ ಮಿರ್ (16) 2017 ರಲ್ಲಿ ಹೈದರಾಬಾದ್ನ ಪುಲ್ಲೇಲಾ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. 2020 ರಲ್ಲಿ ಮಿಶ್ರ ಡಬಲ್ಸ್ ತರಬೇತಿಗಾಗಿ ಗುವಾಹಟಿಯಲ್ಲಿರುವ ಅಸ್ಸೋಂ ಬ್ಯಾಡ್ಮಿಂಟನ್ ಅಕಾಡೆಮಿ ಸೇರಿಕೊಂಡಿದ್ದು, ಪ್ರಸ್ತುತ ಇಲ್ಲಿಯೇ ತರಬೇತಿ ಮುಂದುವರೆಸಿದ್ದಾರೆ.
ತಸ್ನಿಮ್ ಮಿರ್ ಕಳೆದ ತಮ್ಮ ಅದ್ಭುತ ಪ್ರದರ್ಶನದಿಂದಾಗಿ ಮೂರು ಜೂನಿಯರ್ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಇದೀಗ ಜೂನಿಯರ್ ವಿಶ್ವ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಗಳಿಸಿದ್ದಾರೆ. ತಸ್ನಿಮ್ಗೂ ಮುನ್ನ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಪಿ ವಿ ಸಿಂಧು ತಮ್ಮ ಅಂಡರ್-19 ದಿನಗಳಲ್ಲಿ ವಿಶ್ವದ ನಂ 2 ಸ್ಥಾನವನ್ನು ಪಡೆದುಕೊಂಡಿದ್ದರು.
ಇದನ್ನೂ ಓದಿ: Photos: ಈ ಸಾಧನೆ ಮಾಡಿದ ಪಾಕಿಸ್ತಾನದ ಮೊದಲ ಮಹಿಳಾ ಬೌಲರ್ ಸನಾ ಮಿರ್!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಸ್ನಿಮ್, ಕೋವಿಡ್-19 ನಿಂದ ಕ್ರೀಡೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ ನಾನು ನಂಬರ್ ಒನ್ ಆಗುತ್ತೇನೆಂದು ನಿರೀಕ್ಷಿಸಿರಲಿಲ್ಲ. ನಾನು ಬಲ್ಗೇರಿಯಾ, ಫ್ರಾನ್ಸ್ ಮತ್ತು ಬೆಲ್ಜಿಯಂನಲ್ಲಿ ಮೂರು ಈವೆಂಟ್‌ಗಳನ್ನು ಗೆದ್ದಿದ್ದೇನೆ. ಅಂತಿಮವಾಗಿ ನಂ.1 ಆಗಿರುವುದು ಬಹಳ ಸಂತೋಷ ತಂದಿದೆ" ಎಂದು ಹೇಳಿದ್ದಾರೆ.