ನವದೆಹಲಿ : ಭಾರತದ ಯುವ ಬ್ಯಾಡ್ಮಿಂಟನ್ ತಾರೆ ತಸ್ನೀಂ ಮೀರ್ ಅಂಡರ್-19 ಮಹಿಳಾ ಸಿಂಗಲ್ಸ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಶಟ್ಲರ್ ಎನ್ನುವ ದಾಖಲೆ ಬರೆದಿದ್ದಾರೆ.
ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಅವರಿಂದಲೂ ಸಾಧ್ಯವಾಗದ್ದನ್ನು ತಸ್ನಿಂ ಸಾಧಿಸಿದ್ದಾರೆ. ಗುಜರಾತ್‌ನ 16 ವರ್ಷದ ತಸ್ನೀಂ ಕಳೆದ ವರ್ಷ ಮೂರು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದು, ಮೂರು ಸ್ಥಾನ ಮೇಲಕ್ಕೇರಿ ನಂ.1 ಸ್ಥಾನ ಪಡೆದಿದ್ದಾರೆ. ತಸ್ನಿಂ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದ ಸಾಧನೆ ಮಾಡುವಲ್ಲಿ ಇವರ ತಂದೆಯೂ ಪ್ರಮುಖ ಪಾತ್ರ ವಹಿಸಿದ್ದಾರೆ.
ನನ್ನ ತಂದೆ ಬ್ಯಾಡ್ಮಿಂಟನ್ ತರಬೇತುದಾರರಾಗಿದ್ದು, ಮೆಹ್ಸಾನಾ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಾರೆ. ಅವರು ಯಾವಾಗಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದವರು. ನಾನು ಸುಮಾರು 7-8 ವರ್ಷ ವಯಸ್ಸಿನವಳಿದ್ದಾಗ ನನ್ನನ್ನು ಅವರೊಂದಿಗೆ ಕ್ರೀಡೆಗೆ ಕರೆದುಕೊಂಡು ಹೋಗುತ್ತಿದ್ದರು ಎಂದು ತಸ್ನೀಂ ಹೇಳಿದ್ದಾರೆ. ಈ ಬಗ್ಗೆ ಈಟಿವಿ ಭಾರತಕ್ಕೆ ಸಂದರ್ಶನ ನೀಡಿರುವ ತಸ್ನೀಂ ಮೀರ್ ಅವರು, ಹಲವು ಆಸಕ್ತಿಕರವಾದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.
ಪ್ರಶ್ನೆ: ನೀವು ಈವರೆಗೆ ಪಡೆದ ಸಾಧನೆಯ ಬಗ್ಗೆ ಏನು ಹೇಳುತ್ತೀರಿ?
ಉತ್ತರ: ನಾನು ಈಗ ಇತ್ತೀಚಿನ ಬಿಡಬ್ಲ್ಯೂಎಸ್ ಜೂನಿಯರ್ ಶ್ರೇಯಾಂಕದಲ್ಲಿ 19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ವಿಶ್ವದ ನಂಬರ್ 1 ಆಗಿದ್ದೇನೆ. ಜ.12ರಂದು ನಾನು ಸಾಧಿಸಿದ ಶ್ರೇಯಾಂಕ ಇದು. ಕಳೆದ 2 ವರ್ಷಗಳಿಂದ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಜೂನಿಯರ್ ವಿಭಾಗದಲ್ಲಿ ಭಾಗವಹಿಸಿದ್ದ ಪರಿಣಾಮ ನಂಬರ್ ಒನ್ ಪಟ್ಟ ತಂದುಕೊಟ್ಟಿದೆ.
ಪ್ರಶ್ನೆ: ನೀವು ಈವರೆಗೆ ಯಾವ ವಿಭಾಗದಲ್ಲಿ ಪ್ರದರ್ಶನ ನೀಡಿದ್ದೀರಿ ಮತ್ತು ತರಬೇತಿ ಹೇಗೆ?
ಉತ್ತರ: ನಾನು ಇದಕ್ಕೂ ಮೊದಲು ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್ ಆಡಿದ್ದೇನೆ, ಅದರಲ್ಲಿ ಎರಡು ಬಾರಿ ವಿಜೇತಳಾಗಿದ್ದೆ. ರಾಷ್ಟ್ರೀಯ ಮಟ್ಟದಲ್ಲಿ 20 ಪ್ರಶಸ್ತಿಗಳನ್ನು ಗೆದ್ದಿದ್ದೇನೆ. 6 ವರ್ಷಗಳಿಂದ ನನ್ನ ತರಬೇತಿಯನ್ನು ಹೊರಗೆ ಮಾಡುತ್ತಿದ್ದೇನೆ.
2017ರಲ್ಲಿ ಹೈದರಾಬಾದ್‌ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪ್ರಾರಂಭಿಸಿದ್ದೆ. ನಂತರ 2020ರಲ್ಲಿ ಗುವಾಹಟಿಯ ಅಸ್ಸಾಂ ಬ್ಯಾಡ್ಮಿಂಟನ್ ಅಕಾಡೆಮಿಗೆ ಸ್ಥಳಾಂತರಗೊಂಡೆ. ಅಲ್ಲಿ ಇಂಡೋನೇಷ್ಯಾದ ಕೋಚ್ ಬಳಿ ತರಬೇತಿ ಪಡೆಯುತ್ತಿದ್ದೆ. ಪ್ರವಾಸದಲ್ಲಿ ನನ್ನ ತಾಯಿ ಯಾವಾಗಲೂ ನನ್ನೊಂದಿಗೆ ಇರುತ್ತಾರೆ.
ಪ್ರಶ್ನೆ: ನಿಮ್ಮ ತಂದೆಯ ಸಹಯೋಗದ ಬಗ್ಗೆ ತಿಳಿಸಿ?
ಉತ್ತರ: ನಾನು 7 ವರ್ಷದವಳಿದ್ದಾಗ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದೆ. ನನ್ನ ತಂದೆ ತರಬೇತುದಾರರಾಗಿದ್ದರು. ನಾನು ಯಾವಾಗಲೂ ಅವರೊಂದಿಗೆ ಕ್ರೀಡಾಂಗಣಕ್ಕೆ ಹೋಗುತ್ತಿದ್ದೆ. ನಿಯಮಿತ ತರಬೇತಿ ಪ್ರಾರಂಭಿಸಿದಾಗ ರಾಜ್ಯಮಟ್ಟದ ಆಟಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ. ಆಗ ನಾನು ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ನನ್ನ ವೃತ್ತಿಜೀವನ ಆರಂಭಿಸಬೇಕೆಂಬುದನ್ನು ಅರಿತುಕೊಂಡೆ. ನನ್ನ ಕುಟುಂಬದ ಎಲ್ಲ ಸದಸ್ಯರೊಂದಿಗೆ ನನ್ನ ತಂದೆ ತುಂಬಾ ಬೆಂಬಲ ನೀಡಿದರು.
ಪ್ರಶ್ನೆ: ನೀವು ಈವರೆಗೆ ಎಷ್ಟು ಪದಕಗಳು ಮತ್ತು ಪ್ರಶಸ್ತಿಗಳನ್ನು ಪಡೆದಿದ್ದೀರಿ?
ಉತ್ತರ: ಏಷ್ಯನ್ ಜೂನಿಯರ್ ಚಾಂಪಿಯನ್ ಆಗಿದ್ದೇನೆ. ಜೂನಿಯರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 6 ರಿಂದ 7 ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 20 ಬಾರಿ ಗೆದ್ದಿದ್ದೇನೆ.
ಪ್ರಶ್ನೆ: ಬ್ಯಾಡ್ಮಿಂಟನ್ ಆಟಗಾರರಲ್ಲಿ ನಿಮಗೆ ಸ್ಫೂರ್ತಿ ನೀಡಿದ ಆದರ್ಶ ಆಟಗಾರರು ಯಾರು?
ಉತ್ತರ: ಬ್ಯಾಡ್ಮಿಂಟನ್‌ನಲ್ಲಿ ಅನೇಕ ಉತ್ತಮ ಆಟಗಾರರಿದ್ದಾರೆ. ನನಗೆ ಸ್ಫೂರ್ತಿ ನೀಡಿದ್ದು ಸೈನಾ ನೆಹ್ವಾಲ್, ಪಿವಿ ಸಿಂಧು ಈ ಉತ್ತಮ ಆಟಗಾರರು ನನಗೆ ಸ್ಫೂರ್ತಿ ನೀಡಿದ್ದಾರೆ. ನನ್ನ ಆಟದಲ್ಲಿ ಅವರ ಶೈಲಿಯನ್ನು ತರಲು ನಾನು ಪ್ರಯತ್ನಿಸುತ್ತೇನೆ.
ಪ್ರಶ್ನೆ: ನೀವು ಪ್ರತಿದಿನ ಎಷ್ಟು ಗಂಟೆ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತೀರಿ?
ಉತ್ತರ: ನಾನು ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ಸರಿಯಾದ ಆಹಾರ ಸೇವನೆಯೊಂದಿಗೆ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತೇನೆ. ಬಾಲ್ಯದಿಂದಲೂ ಬ್ಯಾಡ್ಮಿಂಟನ್‌ನಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ.
ಪ್ರಶ್ನೆ: ಈಗ ಬ್ಯಾಡ್ಮಿಂಟನ್‌ನಲ್ಲಿ ನಿಮ್ಮ ಗುರಿ ಏನು, ನಿಮ್ಮ ಮುಂದಿನ ಯೋಜನೆ ಏನು?
ಉತ್ತರ: ಸೀನಿಯರ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಮುಂದಿನ ತಿಂಗಳು ಇರಾನ್ ಮತ್ತು ಉಗಾಂಡಾಗೆ ಹೋಗುತ್ತಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಅವಕಾಶ ಪಡೆಯುವ ಗುರಿಯೊಂದಿಗೆ ನಾನು ಹೆಚ್ಚಿನ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತೇನೆ. ಇದರಿಂದ ಹಿರಿಯ ಮಟ್ಟದಲ್ಲಿ ನನ್ನ ಶ್ರೇಯಾಂಕವು ಸ್ಥಿರವಾಗಿರುತ್ತದೆ. ಭಾರತವನ್ನು ಪ್ರತಿನಿಧಿಸುತ್ತೇನೆ.
ಪ್ರಶ್ನೆ: ಈ ಸಾಧನೆಯ ಹಿಂದೆ ನಿಮ್ಮ ಹೋರಾಟ ಏನು?
ಉತ್ತರ: ನಾನು ಬ್ಯಾಡ್ಮಿಂಟನ್ ಆಡಲು ಆರಂಭಿಸಿದಾಗ ಕೋರ್ಟ್ ತುಂಬಾ ದುಬಾರಿಯಾಗಿತ್ತು. ರಾಕೆಟ್‌ಗಳು ಮತ್ತು ಬೂಟುಗಳು ತುಂಬಾ ದುಬಾರಿಯಾಗಿದ್ದರಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದೆ. ವೈದ್ಯರು ಮತ್ತು ಅಧಿಕಾರಿಗಳಾಗಿದ್ದ ನನ್ನ ತಂದೆಯ ಸ್ನೇಹಿತರು ಈ ವಿಷಯದಲ್ಲಿ ಸಾಕಷ್ಟು ಬೆಂಬಲ ನೀಡಿದ್ದಾರೆ. ಅದರ ನಂತರ ಫಲಿತಾಂಶವು ಉತ್ತಮವಾಗಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ನಂತರ ಗುಜರಾತ್‌ನ ಕ್ರೀಡಾ ಪ್ರಾಧಿಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ ನನ್ನ ಪ್ರಾಯೋಜಕತ್ವ ವಹಿಸುವ ಮೂಲಕ ಬೆಂಬಲ ನೀಡಿದ್ದಾರೆ.
ಪ್ರಶ್ನೆ: ಇತರ ಆಟಗಾರರಿಗೆ ಸ್ಫೂರ್ತಿ ನೀಡಲು ನೀವು ಏನು ಹೇಳುತ್ತೀರಿ?
ಉತ್ತರ: ನಾನು ಆಯ್ಕೆ ಮಾಡಿದ ಕ್ರೀಡಾ ಕ್ಷೇತ್ರದಲ್ಲಿ ಯಶಸ್ವಿಯಾಗಿರುವುದರಿಂದ ಒಬ್ಬರು ಕ್ರೀಡೆಯಲ್ಲಿ ಉತ್ತಮ ವೃತ್ತಿಜೀವನ ಹೊಂದಬಹುದು ಎಂದು ತಸ್ನೀಂ ಮೀರ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವದ ನಂ.1 ಸ್ಥಾನಕ್ಕೇರಿದ ಭಾರತದ ಮೊದಲ U-19 ಬ್ಯಾಡ್ಮಿಂಟನ್ ಆಟಗಾರ್ತಿ ತಸ್ನಿಮ್ ಮಿರ್..