ದುಬೈ: ದುಬೈ ಓಪನ್ ತನ್ನ ಕೊನೆಯ ಟೂರ್ನಿ ಎಂದು ಈ ಮೊದಲೇ ಘೋಷಿಸಿದ್ದ ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸೋಲಿನೊಂದಿಗೆ ತಮ್ಮ 20 ವರ್ಷಗಳ ವೃತ್ತಿ ಜೀವನವನ್ನು ಮಂಗಳವಾರ ಮುಕ್ತಾಯಗೊಳಿಸಿದರು. ಈಗಾಗಲೇ ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳಿಗೆ ನಿವೃತ್ತಿ ಹೇಳಿದ್ದ ಸಾನಿಯಾ ವೃತ್ತಿಪರ ಟೆನಿಸ್ಗೂ ಪೂರ್ಣ ವಿರಾಮ ಹಾಕಿದರು.
ಇಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಅಮೆರಿಕದ ಜೊತೆಗಾರ್ತಿ ಮ್ಯಾಡಿಸನ್ ಕೀಸ್ ಅವರೊಂದಿಗೆ ಕಣಕ್ಕಿಳಿದ ಸಾನಿಯಾ ಮಿರ್ಜಾ ಅವರು ನೇರ ಸೆಟ್‌ಗಳಲ್ಲಿ ಸೋಲುವ ಮೂಲಕ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಸಾನಿಯಾ ಮತ್ತು ಕೀಸ್ 4-6 0-6 ನೇರ ಸೆಟ್ಗಳಿಂದ ರಷ್ಯಾದ ಫ್ರೋನಿಕಾ ಕುದರ್ಮೇತುಫ್ಫಾ ಮತ್ತು ಲೈಡ್ಮೈಲಾ ಸ್ಯಾಮ್ಸ್ನೋವಾ ವಿರುದ್ಧ ಒಂದು ಗಂಟೆಯಲ್ಲಿ ಸೋಲು ಕಂಡರು.
ಕಳೆದ ಆಸ್ಟ್ರೇಲಿಯನ್ ಬಳಿಕ ಗ್ರ್ಯಾನ್ ಸ್ಲಾಮ್ ಟೂರ್ನಿಗಳಿಗೆ ವಿದಾಯ ಹೇಳಿದ್ದ 36 ವರ್ಷದ ಆಟಗಾರ್ತಿ, ದುಬೈ ಓಪನ್ ಬಳಿಕ ಟೆನಿಸ್ನಿಂದಲೇ ನಿವೃತ್ತಿ ಪಡೆಯುವುದಾಗಿ ಈ ಮೊದಲೇ ಘೋಷಿಸಿದ್ದರು. ಈ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲುವಿನೊಂದಿಗೆ ವೃತ್ತಿ ಬದುಕು ಮುಗಿಸುವ ಅವರ ಕನಸು ಈಡೇರಲಿಲ್ಲ.
ಸಿಂಗಲ್ಸ್ನಿಂದ ಡಬಲ್ಸ್ ಕಡೆ ಜಂಪಿಂಗ್: 2003 ರಲ್ಲಿ ಟೆನಿಸ್ಗೆ ಅಂಗಳಕ್ಕೆ ಪದಾರ್ಪಣೆ ಮಾಡಿದ ಸಾನಿಯಾ ಮಿರ್ಜಾ, 2013 ರವರೆಗೂ ಅಂದರೆ 10 ವರ್ಷ ಸಿಂಗಲ್ಸ್ನಲ್ಲಿ ಸೆಣಸುತ್ತಿದ್ದರು. ಆದರೆ, ಅವರಿಗೆ ಈ ಮಾದರಿಯಲ್ಲಿ ಹೆಚ್ಚು ಯಶಸ್ಸು ದೊರೆಯದ ಕಾರಣ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ನಲ್ಲಿ ಮುಂದುವರಿದರು. ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರೊಂದಿಗೆ 3 ಮಹಿಳಾ ಡಬಲ್ಸ್ ಸೇರಿದಂತೆ 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಸಾನಿಯಾ ಜಯಿಸಿದ್ದಾರೆ.
ಮಹಿಳಾ ಡಬಲ್ಸ್ನಲ್ಲಿ 91 ವಾರಗಳ ಕಾಲ ವಿಶ್ವ ನಂಬರ್ 1 ಆಟಗಾರ್ತಿ ಸ್ಥಾನವನ್ನು ಅಲಂಕರಿಸಿದ್ದರು. ಸಾನಿಯಾ ಅವರು, ಡಬಲ್ಸ್, ಮಿಶ್ರ ಡಬಲ್ಸ್, ಮಹಿಳಾ ಡಬಲ್ಸ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಅದರಲ್ಲಿ ಮಾರ್ಟಿನಾ ಹಿಂಗಿಸ್ ಜೊತೆ 2015 ರಲ್ಲಿ ವಿಂಬಲ್ಡನ್, ಅಮೆರಿಕ ಓಪನ್, ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಶಿಪ್ ಗೆದ್ದರೆ, ಮಹೇಶ್ ಭೂಪತಿ ಜೊತೆ 2009 ರಲ್ಲಿ ಆಸ್ಟ್ರೇಲಿಯನ್ ಓಪನ್, 2012 ರಲ್ಲಿ ಫ್ರೆಂಚ್ ಓಪನ್ ಜಯಿಸಿದ್ದರು. ಇದಲ್ಲದೇ 2014 ರಲ್ಲಿ ಬ್ರೆಜಿಲ್ನ ಬ್ರುನೊ ಸೊರೆಸ್ ಜೊತೆ ಯುಎಸ್ ಓಪನ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು. ಗ್ರ್ಯಾನ್ ಸ್ಲಾಮ್ ಮಹಿಳಾ ಡಬಲ್ಸ್ನಲ್ಲಿ ಒಂದು ಬಾರಿ, ಮಹಿಳಾ ಡಬಲ್ಸ್ನಲ್ಲಿ 5 ಬಾರಿ ಫೈನಲ್ನಲ್ಲಿ ಸೋತು ರನ್ನರ್ ಅಪ್ ಕೂಡಾ ಆಗಿದ್ದಾರೆ.
ಪ್ರಶಸ್ತಿಗಳು: ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರ ವರ್ಣರಂಜಿತ ವೃತ್ತಿ ಜೀವನದಲ್ಲಿ ಹಲವಾರು ಪ್ರಶಸ್ತಿಗಳು ಒಲಿದಿವೆ. ಒಟ್ಟಾರೆ 43 ಪ್ರಶಸ್ತಿಗಳನ್ನು ಸಾನಿಯಾ ಬಾಚಿಕೊಂಡಿದ್ದಾರೆ. ಇದಲ್ಲದೇ, ಇವರ ಸಾಧನೆಯನ್ನು ಗುರುತಿಸಿ 2004 ರಲ್ಲಿ ಅರ್ಜುನ, 2006 ರಲ್ಲಿ ಪದ್ಮಶ್ರೀ, 2015 ರಲ್ಲಿ ಖೇಲ್ ರತ್ನ, 2016 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕ್ರಿಕೆಟ್ನಲ್ಲಿ ಸಾನಿಯಾ ಮೆಂಟರ್: ಟೆನಿಸ್ ವೃತ್ತಿ ಜೀವನದಿಂದ ನಿವೃತ್ತರಾಗಿರುವ ಸಾನಿಯಾ ಮಿರ್ಜಾ, ಮಹಿಳಾ ಪ್ರೀಮಿಯರ್ ಲೀಗ್ನ ಮೊದಲ ಟೂರ್ನಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್(ಆರ್‌ಸಿಬಿ) ತಂಡಕ್ಕೆ ಮೆಂಟರ್ ಆಗಿ ನೇಮಕವಾಗಿದ್ದಾರೆ. ಇದನ್ನು ಆರ್‌ಸಿಬಿ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
ಆರ್‌ಸಿಬಿಗೆ ಮೆಂಟರ್ ಆಗಿದ್ದಕ್ಕೆ ಸಾನಿಯಾ ಮಿರ್ಜಾ ಸಂತಸ ವ್ಯಕ್ತಪಡಿಸಿದ್ದಾರೆ. RCB ಮಹಿಳಾ ತಂಡವನ್ನು ಭೇಟಿಯಾಗಲು ಸಂತೋಷವಾಗಿದೆ. ಮಹಿಳಾ ಪ್ರೀಮಿಯರ್ ಲೀಗ್‌ನೊಂದಿಗೆ ಮಹಿಳಾ ಕ್ರಿಕೆಟ್ ಹೊಸ ಎತ್ತರವನ್ನು ತಲುಪುವುದು ಖಚಿತ. ಈ ರೀತಿಯ ಮೆಗಾ ಲೀಗ್‌ಗಳು ಹುಡುಗಿಯರಿಗೆ ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡಲು ದಾರಿ ಮಾಡಿಕೊಡುತ್ತವೆ. ಮಾರ್ಗದರ್ಶಕರ ಪಾತ್ರವನ್ನು ತೆಗೆದುಕೊಳ್ಳಲು ಉತ್ಸುಕಳಾಗಿದ್ದೇನೆ ಎಂದು ಸಾನಿಯಾ ಹೇಳಿದ್ದರು.
ಓದಿ: ಮಹಿಳಾ ಪ್ರೀಮಿಯರ್ ಲೀಗ್ 2023: ಆರ್‌ಸಿಬಿ ಮೆಂಟರ್ ಆಗಿ ಮೂಗುತಿ ಸುಂದರಿ ಸಾನಿಯಾ ಆಯ್ಕೆ