ಲುಸೈಲ್(ಕತಾರ್): ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿ ಜೀವನದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನ ಫೈನಲ್ ಪಂದ್ಯವೇ ತಮ್ಮ ಕೊನೆಯ ವಿಶ್ವಕಪ್ ಟೂರ್ನಿ ಎಂದು ಖಚಿತಪಡಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ಈಗಾಗಲೇ ಫೈನಲ್ಗೆ ಲಗ್ಗೆ ಇಟ್ಟಿದೆ. ನಿನ್ನೆ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕ್ರೂವೇಷಿಯಾ ವಿರುದ್ಧದ 3-0 ಗೋಲಿಗಳಿಂದ ಗೆದ್ದು ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. 35 ವರ್ಷ ವಯಸ್ಸಿನ ಮೆಸ್ಸಿ ಅವರಿಗೆ ಇದು ಐದನೇ ಫಿಫಾ ವಿಶ್ವಕಪ್ ಆಗಿದ್ದು, ಇದೀಗ ಈ ಫೈನಲ್ ಪಂದ್ಯವೇ ತಮ್ಮ ಕೊನೆಯ ವಿಶ್ವಕಪ್ ಎಂದು ಪ್ರಕಟಿಸಿದ್ದಾರೆ.
ಡಿಸೆಂಬರ್ 18ರಂದು ನನ್ನ ಕೊನೆಯ ಪಂದ್ಯವನ್ನು ಫೈನಲ್‌ನಲ್ಲಿ ಆಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸುತ್ತೇನೆ. ಇದನ್ನು ಸಾಧಿಸಲು ಸಾಧ್ಯವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಮುಂದಿನ ವಿಶ್ವಕಪ್ಗೆ ಹಲವು ವರ್ಷಗಳಿದ್ದು, ಮುಂದೆ ಮತ್ತೆ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಈ ಫೈನಲ್ ಮೂಲಕ ವಿಶ್ವಕಪ್ ಜರ್ನಿ ಮುಗಿಸುವುದು ಅತ್ಯುತ್ತಮವಾಗಿದೆ ಎಂದು ಮೆಸ್ಸಿ ತಿಳಿಸಿದ್ದಾರೆ.
ಅರ್ಜೆಂಟೀನಾ ತಂಡ ಒಟ್ಟಾರೆ ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಆಗಿದ್ದು, ಕೊನೆಯ ಬಾರಿಗೆ 1986ರಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. ಜೊತೆಗೆ ಇದುವರೆಗೆ ಆರು ಬಾರಿ ಫೈನಲ್ ಪ್ರವೇಶಿಸಿದೆ. ಎರಡನೇ ಸೆಮಿಫೈನಲ್ ಪಂದ್ಯ ಫ್ರಾನ್ಸ್ ಮತ್ತು ಮೊರಾಕ್ಕೊ ನಡುವೆ ಇಂದು ರಾತ್ರಿ ನಡೆಯಲಿದೆ. ಇಲ್ಲಿ ಗೆದ್ದ ತಂಡದ ವಿರುದ್ಧ ಅರ್ಜೆಂಟೀನಾ ಡಿ.18ರಂದು ನಡೆಯುವ ಫೈನಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಸಲಿದೆ.
ಇದನ್ನೂ ಓದಿ: ಫಿಫಾ ವಿಶ್ವಕಪ್: ಕ್ರೊವೇಷಿಯಾ ಸೋಲಿಸಿ ಫೈನಲ್ ತಲುಪಿದ ಅರ್ಜೆಂಟೀನಾ, ಅಂತಿಮ ಕದನಕ್ಕೆ ರೆಡಿ