ಬೆಂಗಳೂರು : ಎರಡನೇ ಆವೃತ್ತಿಯ ರುಪೇ ಪ್ರೈಮ್ ವಾಲಿಬಾಲ್ ಲೀಗ್ ಟೂರ್ನಿಗೆ ನಾಳೆಯಿಂದ ಚಾಲನೆ ಸಿಗಲಿದೆ. ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ಹಾಗೂ ಆತಿಥೇಯ ಬೆಂಗಳೂರು ಟಾರ್ಪೆಡೋಸ್ ತಂಡಗಳು ಮುಖಾಮುಖಿಯಾಗಲಿವೆ.
ಒಟ್ಟು 31 ಪಂದ್ಯಗಳು ನಡೆಯಲಿದ್ದು, ಲೀಗ್ ಹಂತದ ಪಂದ್ಯಗಳಿಗೆ ಕ್ರಮವಾಗಿ ಬೆಂಗಳೂರು ಹೈದರಾಬಾದ್ ಹಾಗೂ ಕೊಚ್ಚಿ ಆತಿಥ್ಯ ವಹಿಸಲಿವೆ. ಮಾರ್ಚ್ 5ರಂದು ಕೊಚ್ಚಿಯಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತದ ಯುವ ವಾಲಿಬಾಲ್ ಆಟಗಾರರ ಜೊತೆ ಆಸ್ಟ್ರೇಲಿಯಾದ ಟ್ರೆಂಟ್ ಓ 'ಡಿಯಾ, ವೆನೆಜುವೆಲಾದ ಜೋಸ್ ವೆರ್ಡಿ, ಪೆರುವಿನ ಎಡ್ಯುರೋ ರೋಮೆ ಪ್ರಮುಖ ಆಕರ್ಷಣೆಯಾಗಿರಲಿದ್ದಾರೆ.
ಇದೇ ಮೊದಲ ಬಾರಿಗೆ ಎಂಟು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು ಮುಂಬೈ ಮೆಟಿಯೋರ್ಸ್ ನೂತನ ತಂಡವಾಗಿ ಟೂರ್ನಿಗೆ ಪಾದಾರ್ಪಣೆ ಮಾಡಲಿದೆ. ಮೊದಲ ಆವೃತ್ತಿಯ ಪಂದ್ಯಾವಳಿಯನ್ನ ಕೋವಿಡ್ ಕಾರಣದಿಂದ ಹೈದರಾಬಾದಿನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾಗಿತ್ತು. ಆದರೆ ಈ ಬಾರಿ ಮೂರು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿದ್ದು ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಪ್ರವೇಶವಿರಲಿದೆ.
ಈ ಕುರಿತು ಇಂದು ಬೆಂಗಳೂರಿನ ರಿನೈಸಾನ್ ಹೋಟೆಲ್ನಲ್ಲಿ ಮಾಧ್ಯಮಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ರುಪೇ ಪ್ರೈಮ್ ವಾಲಿಬಾಲ್ ಲೀಗ್ ಸಿಇಒ ಜಾಯ್ ಭಟ್ಟಾಚಾರ್ಯ ಮಾತನಾಡಿ, ಮೊದಲ ಸೀಸನ್‌ನ ಯಶಸ್ವಿಯಾಗಿ ಮುಗಿದಿತ್ತು ಎರದನೇ ಆವೃತ್ತಿಗೆ ತಯಾರಾಗುತ್ತಿದ್ದೇವೆ. ಇಂಟರ್ನ್ಯಾಷನಲ್ ವಾಲಿಬಾಲ್ ಫೆಡರೇಶನ್ (ಎಫ್ಐವಿಬಿ) ಜೊತೆಗೆ ಸಹಭಾಗಿತ್ವವನ್ನು ಹೊಂದಿದ್ದೇವೆ. ವಾಲಿಬಾಲ್ ಕ್ಲಬ್ ವರ್ಲ್ಡ್ ಕಪ್ ಭಾರತದಲ್ಲಿ ಆಯೋಜನೆ ಮಾಡಲಿದ್ದೇವೆ ಎಂದರು.
ಕ್ರೀಡಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಬೇಸ್‌ಲೈನ್ ವೆಂಚರ್ಸ್‌ನ ಸಹ-ಸಂಸ್ಥಾಪಕ ಮತ್ತು ರುಪೇ ಪ್ರೈಮ್ ವಾಲಿಬಾಲ್ ಲೀಗ್‌ನ ಸಹ-ಪ್ರವರ್ತಕ ತುಹಿನ್ ಮಿಶ್ರಾ ಅವರ ಮಾತನಾಡಿ, ನಾವು ಮುಂದಿನ ವರ್ಷಗಳಲ್ಲಿ ಮಹಿಳಾ ಲೀಗ್ನ್ನು ಮಾಡುವ ಚಿಂತನೆಯಲ್ಲಿದ್ದೇವೆ. ಮುಂದಿನ ಕೆಲವು ವರ್ಷಗಳ ಕಾಲ ಪುರುಷರ ಲೀಗ್ ಖ್ಯಾತಿಗೆ ತಂದ ನಂತರ, ವನಿತೆಯರ ಲೀಗ್ ಮಾಡಲಾಗುವುದು. ಈ ನಡುವೆ ಮಹಿಳಾ ಆಟಗಾರರ ಗುಂಪನ್ನು ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: 9 ವರ್ಷಗಳ ಬಳಿಕ ಪೋಷಕರನ್ನು ಸೇರಿದ ಕಾಣೆಯಾಗಿದ್ದ ಬಾಲಕ: ಇದು ಫುಟ್ಬಾಲ್ ಮ್ಯಾಜಿಕ್!