ಟೋಕಿಯೋ: ಈಗಾಗಲೇ ಕಂಚಿನ ಪದಕ ಖಚಿತಪಡಿಸಿಕೊಂಡಿರುವ ಭಾರತದ ಲವ್ಲಿನಾ ಬೋರ್ಗಹೈನ್ ಬುಧವಾರ ಒಲಿಂಪಿಕ್ ಸೆಮಿಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಇಲ್ಲಿ ಜಯ ಸಾಧಿಸಿದರೆ ಒಲಿಂಪಿಕ್ಸ್ ಇತಿಹಾಸದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಬಾಕ್ಸರ್ ಎಂಬ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ.
ಮುಯಾ ಥಾಯ್ ಮೂಲಕ ವೃತ್ತಿ ಜೀವನ ಆರಂಭಿಸಿದ 23 ವರ್ಷದ ಅಸ್ಸೋಂ ಬಾಕ್ಸರ್, ಒಲಿಂಪಿಕ್ಸ್ ಇತಿಹಾಸದಲ್ಲಿ ಪೋಡಿಯಮ್ ಏರಲಿರುವ ಕೇವಲ 3ನೇ ಬಾಕ್ಸರ್ ಎನಿಸಿಕೊಳ್ಳಲಿದ್ದಾರೆ. 2008ರಲ್ಲಿ ವಿಜೇಂದ್ರ ಸಿಂಗ್ ಮತ್ತು 2012ರಲ್ಲಿ ಮೇರಿಕೋಮ್ ಕಂಚಿನ ಪದಕ ಪಡೆದಿದ್ದರು. ಇದೀಗ ಲವ್ಲಿನಾ ಕೂಡ ಕಂಚು ಖಚಿತ ಪಡಿಸಿಕೊಂಡಿದ್ದು, ನಾಳೆ ನಡೆಯವ ಪಂದ್ಯದಲ್ಲಿ ಗೆದ್ದರೆ ಇತಿಹಾಸ ನಿರ್ಮಿಸಲಿದ್ದಾರೆ.
ಕಳೆದ 9 ವರ್ಷಗಳಲ್ಲಿ ಬಾಕ್ಸಿಂಗ್ನಲ್ಲಿ ಲವ್ಲಿನಾ ಮಾತ್ರ ಪದಕ ಪಡೆದವರಾಗಿದ್ದಾರೆ. 2016 ಮತ್ತು 2020ರಲ್ಲಿ ಯಾವೊಬ್ಬ ಬಾಕ್ಸರ್ ಕೂಡ ಸೆಮಿಫೈನಲ್ ಪ್ರವೇಶಿಸುವಲ್ಲಿ ಸಫಲರಾಗಿಲ್ಲ ಎನ್ನುವುದ ಮತ್ತೊಂದು ವಿಶೇಷ.
ಸೆಮಿಫೈನಲ್ ಪ್ರವೇಶ ಪಡೆದ ನಂತರ ಕಳೆದ ಎರಡು ದಿನದಿಂದ ಪ್ರತಿದಿನ ಮಧ್ಯಾಹ್ನ ನಾವು ತರಬೇತಿ ನಡೆಸುತ್ತಿದ್ದೇವೆ. ಲವ್ಲಿನಾಗೆ ಸಂಬಂಧಿಸಿದಂತೆ, ಕಾರ್ಯತಂತ್ರದ ದೃಷ್ಟಿಯಿಂದ ತಿಳಿಸಬೇಕಾದ ಎಲ್ಲವನ್ನೂ ಅವರಿಗೆ ತಿಳಿಸಲಾಗಿದೆ. ಅವರೂ ಕೂಡ ಸಿದ್ಧಳಾಗಿದ್ದಾರೆ. ಎದುರಾಳಿಯೊಂದಿಗೆ ಈ ಹಿಂದೆ ಎಂದೂ ಮುಖಾಮುಖಿಯಾಗಿರಲಿಲ್ಲ ಹಾಗಾಗಿ ಇದು ಇಬ್ಬರಿಗೂ ಇದು ಮೊದಲ ಮುಖಾಮುಖಿಯಾಗಿದೆ ಎಂದು ಭಾರತದ ರಾಷ್ಟ್ರೀಯ ಕೋಚ್ ಮೊಹಮ್ಮದ್ ಅಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮಾಜಿ ವಿಶ್ವಚಾಂಪಿಯನ್ ಚೀನಾದ ಚಿನ್ ಚೆನ್ ಅವರನ್ನು ಮಣಿಸಿರುವ ಲವ್ಲಿನಾ ಟೋಕಿಯೋಗೆ ಪ್ರಯಾಣಿಸಿದ್ದ 9 ಬಾಕ್ಸರ್ಗಳಲ್ಲಿ ಪದಕ ಪಡೆದಿರುವ ಏಕೈಕ ಭಾರತೀಯ ಬಾಕ್ಸರ್ ಆಗಿದ್ದಾರೆ.