ಶೆಫೀಲ್ಡ್ (ಇಂಗ್ಲೆಂಡ್): ಪ್ರಮೋದ್ ಭಗತ್ ಅವರು ನಾಲ್ಕು ರಾಷ್ಟ್ರಗಳ ಪ್ಯಾರಾ ಬ್ಯಾಡ್ಮಿಂಟನ್ ಅಂತಾರಾಷ್ಟ್ರೀಯ ಪಂದ್ಯಾವಳಿಯ ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ. ಭಾರತದ ಮತ್ತೋರ್ವ ಷಟ್ಲರ್ ಸುಕಾಂತ್ ಕದಮ್ ಅವರು ತಮ್ಮ ಜೊತೆಗಾರ ಪ್ರಮೋದ್ ಭಗತ್ ಅವರೊಂದಿಗೆ ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ ಆಡಲಿದ್ದಾರೆ. ಭಗತ್ ಜೊತೆಗೆ ಮಿಶ್ರ ಡಬಲ್ಸ್‌ನಲ್ಲಿ ಮನಿಶಾ ರಾಮದಾಸ್ ಪ್ರಶಸ್ತಿ ಪಂದ್ಯ ಆಡುವರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರಮೋದ್, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಸಿಂಗಲ್ಸ್ನಲ್ಲಿ ದೇಶೀಯ ಎದುರಾಳಿ ಕುಮಾರ್ ನಿತೇಶ್ ಅವರನ್ನು ಕೇವಲ 35 ನಿಮಿಷಗಳ ಆಟದಲ್ಲಿ ಮಣಿಸಿದರು. ನಿತೇಶ್‌ರಿಗೆ ಅಂಕ ಗಳಿಸಲು ಸಮಯವೇ ಕೊಡದಂತೆ ತಮ್ಮ ಅಂಕವನ್ನು ಮುನ್ನಡೆಸಿಕೊಂಡು ಫೈನಲ್ ತಲುಪಿದರು. ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್‌ನ ಡೇನಿಯಲ್ ಬೆಥೆಲ್ ವಿರುದ್ಧ ಇವರು ಸೆಣಸಾಡಬೇಕಿದೆ.
ಮಿಶ್ರ ಡಬಲ್ಸ್‌ನಲ್ಲಿ ಪ್ರಮೋದ್ ತಮ್ಮ ಜೊತೆಗಾರ್ತಿ ಮನಿಶಾ ರಾಮದಾಸ್ ಅವರೊಂದಿಗೆ ಭಾರತದ ಇನ್ನೊಂದು ವಿಶ್ರ ಜೋಡಿ ರುತಿಕ್ ರಘುಪತಿ ಮತ್ತು ಮಾನಸಿ ಜೋಶಿ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದರು. 21-12, 21-19 ರಿಂದ ಸೋಲಿಸಿ ಫೈನಲ್ಗೆ ಪ್ರವೇಶಿಸಿದ ವಿಶ್ರ ಜೋಡಿ ಮುಂದೆ ಇಂಡೋನೇಷ್ಯಾದ ಹಿಕ್ಮತ್ ರಾಮ್ದಾನಿ ಮತ್ತು ಲಿಯಾನಿ ರಾತ್ರಿ ಒಕ್ಟಿಲಾ ಅವರನ್ನು ಎದುರಿಸಬೇಕಿದೆ.
ಪುರುಷರ ಡಬಲ್ಸ್‌ನಲ್ಲಿ ವಿಶ್ವದ ನಂ.1 ಜೋಡಿ ಪ್ರಮೋದ್ ಭಗತ್ ಮತ್ತು ಸುಕಾಂತ್ ಕದಮ್ ಅವರು ಭಾರತದ ಕುಮಾರ್ ನಿತೇಶ್ ಮತ್ತು ತರುಣ್ ಅವರನ್ನು ಸೆಮಿಫೈನಲ್‌ನಲ್ಲಿ ಎದುರಿಸಿದರು. ಇವರ ವಿರುದ್ಧ 21-19, 21-12 ರ ನೇರ ಎರಡು ಸೆಟ್ಗಳನ್ನು ಗೆಲ್ಲುವ ಮೂಲಕ ಫೈನಲ್ಗೆ ಪ್ರವೇಶಿಸಿದರು. ಕೇವಲ 26 ನಿಮಿಷಗಳ ಕಾಲ ಈ ಜೋಡಿ ಪಂದ್ಯವನ್ನು ಆಡಿತ್ತು. ಪ್ರಶಸ್ತಿ ಸುತ್ತಿನಲ್ಲಿ ಭಾರತದ ದೀಪ್ ರಂಜನ್ ಬಿಸೋಯಿ ಮತ್ತು ಮನೋಜ್ ಸರ್ಕಾರ್ ಜೋಡಿಯ ವಿರುದ್ಧ ಪಂದ್ಯವಾಡಬೇಕಿದೆ.
ಮತ್ತೊಂದೆಡೆ, ಸುಕಾಂತ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವಾನ್ ವಿರುದ್ಧ ಹೋರಾಡಿ ಸೋಲನುಭವಿಸಿದರು. ಸುಕಾಂತ್ ಮೊದಲ ಗೇಮ್‌ನಲ್ಲಿ 21-7 ರಿಂದ ನಿರಾಯಾಸವಾಗಿ ಗೆದ್ದುಕೊಂಡರು. ಆದರೆ ಎರಡನೇ ಮತ್ತು ಮೂರನೇ ಸೆಟ್ನಲ್ಲಿ ತೀವ್ರ ಪೈಪೋಟಿ ಎದುರಿಸಿದ್ದರಿಂದ ಫ್ರೆಡಿ ವಿರುದ್ಧ 21-15 ಮತ್ತು 21-16 ಅಂಕಗಳೊಂದಿಗೆ ಸೋಲು ಕಂಡರು.
ಇದನ್ನೂ ಓದಿ: ಆಸ್ಟ್ರೇಲಿಯನ್ ಓಪನ್ನಲ್ಲಿ ಫೈನಲ್ ಪ್ರವೇಶಿಸಿದ ಪ್ರಣಯ್.. ಪ್ಯಾರಾ-ಬ್ಯಾಡ್ಮಿಂಟನ್ನಲ್ಲಿ ಪ್ರಮೋದ್, ಸುಕಾಂತ್ ಸೆಮಿಸ್ಗೆ