ಅಹಮದಾಬಾದ್: ಬೆಂಗಳೂರು ಬುಲ್ಸ್ನ ಪವನ್ ಶೆರಾವತ್ ಅವರ ಭರ್ಜರಿ ಪ್ರದರ್ಶನದ ಹೊರತಾಗಿಯೂ ಸೋಮವಾರ ನಡೆದ ಯುಪಿ ಯೋಧ ವಿರುದ್ಧ 35-33 ಅಂಕಳಿಂದ ಸೋಲು ಕಂಡಿದೆ.
ಇಡೀ ಟೂರ್ನಿಯಲ್ಲಿ ಬೆಂಗಳೂರಿನ ಪರ ಪವನ್ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಗೆಲುವಿಗಾಗಿ ಹೆಚ್ಚು ಅವರನ್ನೇ ನಂಬಿಕೊಂಡಿರುವುದೇ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಶನಿವಾರ ಹರಿಯಾಣ ವಿರುದ್ಧ ಮುಗ್ಗರಿಸಿದ್ದ ಬುಲ್ಸ್ ಯೋಧ ವಿರುದ್ಧವೂ 33-30ರ ಅಂತರದಿಂದ ಮತ್ತೆ ಸೋಲುಕಂಡಿದೆ.
ಬೆಂಗಳೂರು ತಂಡದ ಪರ ನಾಯಕ ರೋಹಿತ್ ಕುಮಾರ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣವಾಯಿತು. ಲೀಗ್‌ನ ಅತ್ಯುತ್ತಮ ರೇಡರ್‌ಗಳಲ್ಲಿ ಒಬ್ಬರಾದ ರೋಹಿತ್ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಹರಿಯಾಣ ಪಂದ್ಯದಲ್ಲಿ 12 ಅಂಕಗಳಿಸಿದ್ದ ರೋಹಿತ್ ಯೋಧ ವಿರುದ್ಧ ಕೇವಲ 4 ಅಂಕ ಮಾತ್ರ ಸಂಪಾದಿಸಿದರು. ಆದರೆ, ಪವನ್ ತಮ್ಮ ಭರ್ಜರಿ ಪ್ರದರ್ಶನ ಮುಂದುವರಿಸಿ 6 ರೈಡಿಂಗ್, 6 ಬೋನಸ್ ಹಾಗೂ ಮತ್ತೆರಡು ಟ್ಯಾಕಲ್ ಅಂಕಗಳೊಂದಿಗೆ ಒಟ್ಟಾರೆ 14 ಅಂಕಗಳ ಕಾಣಿಕೆ ನೀಡಿ ತಂಡಕ್ಕೆ ಜಯ ತಂದುಕೊಡಲು ಪ್ರಯತ್ನಿಸಿ ವಿಫಲರಾದರು.
ಬುಲ್ಸ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಯೋಧ ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು. ತಂಡದ ಸ್ಟಾರ್ ರೈಡರ್ ಶ್ರೀಕಾಂತ್ ಯಾದವ್ 9, ಮೋನು ಗೋಯಟ್ 8, ಸುಮಿತ್ 5,ಅಮಿತ್ 3 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ತೆಲುಗು ಟೈಟನ್ಸ್ ನಡುವಿನ ಪಂದ್ಯ 29-29 ಅಂಕಗಳಿಂದ ಟೈನಲ್ಲಿ ಅಂತ್ಯಗೊಂಡಿತು.