ದುಬೈ: ಭಾರತದ ಆರ್ಚರ್ ಪೂಜಾ ಭಾನುವಾರ ಇಲ್ಲಿ ನಡೆಯುತ್ತಿರುವ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನ ವೈಯಕ್ತಿಕ ವಿಭಾಗದಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ. 24 ವರ್ಷದ ಪೂಜಾ ಆರಂಭದಲ್ಲಿ ಬ್ರಿಟನ್ನ ಹ್ಯಾಝೆಲ್ ಚೈಸ್ಟಿ ವಿರುದ್ಧ 0-2 ರಿಂದ ಹಿನ್ನಡೆ ಅನುಭವಿಸಿದ್ದರು. ಆದರೆ ಅದ್ಭುತವಾಗಿ 6-2ರಲ್ಲಿ ಗೆಲುವು ಸಾಧಿಸಿ ಬೆಳ್ಳಿಯ ಪದಕ ಖಚಿತಪಡಿಸಿಕೊಂಡರು.
ಈ ಮೂಲಕ ವಿಶ್ವ ಪ್ಯಾರಾ ಆರ್ಚರಿ ಕೂಟದಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಪ್ಯಾರಾ ಆರ್ಚರ್ ಎನಿಸಿಕೊಂಡರು. ದೇಶದ ಮೊದಲ ಪ್ಯಾರಾ ವಿಶ್ವಚಾಂಪಿಯನ್ ಆಗಲು ಸನಿಹದಲ್ಲಿರುವ ಪೂಜಾ ಫೈನಲ್ನಲ್ಲಿ ಇಟಲಿಯ ಪೆಟ್ರಿಲಿ ವಿನ್ಸೆನ್ಜಾ ಅವರನ್ನು ಎದುರಿಸಲಿದ್ದಾರೆ.
ಪೂಜಾ ಸಿಂಗಲ್ಸ್ನಲ್ಲಿ ಮಾತ್ರವಲ್ಲದೆ ಎರಡನೇ ದಿನ ಭಾರತಕ್ಕೆ ಮತ್ತೊಂದು ಪದಕವನ್ನು ತಂದುಕೊಡಲು ಸಜ್ಜಾಗಿದ್ದಾರೆ. ಅವರು ಡಬಲ್ಸ್ನಲ್ಲಿ ಸೀನಿಯರ್ ಆರ್ಚರ್ ಪೂಜಾ ಖನ್ನ ಜೊತೆಯಾಗಿ ಕಂಚಿನ ಪದಕಕ್ಕಾಗಿ ಕಣದಲ್ಲಿದ್ದಾರೆ. ಭಾರತೀಯ ಈ ಜೋಡಿ ಕಂಚಿನ ಪದಕಕ್ಕಾಗಿ ಮಂಗೋಲಿಯನ್ ಸ್ಪರ್ಧಿಗಳನ್ನು ಎದುರಿಸಲಿದ್ದಾರೆ.
ಇದಕ್ಕೂ ಮೊದಲು ಕಾಂಪೌಂಡ್ ಮಿಕ್ಸಡ್ ವಿಭಾಗದಲ್ಲಿ ಶ್ಯಾಮ್ ಸುಂದರ್ ಸ್ವಾಮಿ ಮತ್ತು ಜ್ಯೋತಿ ಬಲಿಯಾನ್ ಬೆಳ್ಳಿ ಪದಕ ಜಯಿಸಿದ್ದರು. ಇದು ವಿಶ್ವ ಆರ್ಚರಿ ಪ್ಯಾರಾ ಚಾಂಪಿಯನ್ಶಿಪ್ನಲ್ಲಿ ಭಾರತ ಗೆದ್ದ ಮೊದಲ ಪದಕವಾಗಿತ್ತು.
ಇದನ್ನೂ ಓದಿ:ಬ್ಯಾಟಿಂಗ್ನಲ್ಲಿ ಬಡ್ತಿ.. ರೋಹಿತ್ ಶರ್ಮಾಗೆ ಧನ್ಯವಾದ ತಿಳಿಸಿ ಭವಿಷ್ಯದ ಸವಾಲಿಗೆ ಸಿದ್ಧ ಎಂದ ಜಡೇಜಾ!