ಕರಾಚಿ: ಯಾವುದೇ ಸ್ಪರ್ಧೆಯಿರಲಿ.. ಅಲ್ಲಿ ಪ್ರದರ್ಶನವೇ ಮುಖ್ಯವೇ ಹೊರತು, ಧರಿಸುವ ಬಟ್ಟೆಯಲ್ಲ. ಕ್ರೀಡೆಗೆ ಧರ್ಮ, ಜಾತಿ, ಆಚರಣೆಗಳು ಅಡ್ಡಿ ಬರಬಾರದು. ಇಂತಿಪ್ಪ ಪಾಕಿಸ್ತಾನ ಮಹಿಳಾ ಫುಟ್ಬಾಲ್ ತಂಡ ಧರಿಸಿದ ಉಡುಗೆಯನ್ನು ಪ್ರಶ್ನಿಸಿ ಪಾಕ್ ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ನೇಪಾಳದ ಕಠ್ಮಂಡುವಿನಲ್ಲಿ ನಡೆಯುತ್ತಿರುವ ಎಸ್ಎಎಫ್ಎಫ್ ಚಾಂಪಿಯನ್ಶಿಪ್ನಲ್ಲಿ ಪಾಕಿಸ್ತಾನ ಮಹಿಳೆಯರು ಮಾಲ್ಡೀವ್ಸ್ ವಿರುದ್ಧ 7-0 ಗೋಲುಗಳಿಂದ ಭರ್ಜರಿಯಾಗಿ ಜಯಗಳಿಸಿದ್ದಾರೆ. ಇದನ್ನು ವರದಿ ಮಾಡಬೇಕಿದ್ದ ಪತ್ರಕರ್ತ ಸಾಧನೆಯನ್ನು ಹೊಗಳುವ ಬದಲಾಗಿ ಆಟಗಾರ್ತಿಯರ ಬಟ್ಟೆಯ ಬಗ್ಗೆ ಆಕ್ಷೇಪ ಎತ್ತಿದ್ದಾರೆ.
ಪಂದ್ಯದ ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ಪಾಕ್ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿಯರು ಶಾರ್ಟ್ಸ್ ಧರಿಸಿದ್ದನ್ನು ಆ ವರದಿಗಾರ ತಂಡದ ಮ್ಯಾನೇಜರ್ ಮತ್ತು ಇತರ ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ. "ನಮ್ಮದು ಇಸ್ಲಾಮಿಕ್ ರಾಷ್ಟ್ರ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನಕ್ಕೆ ಸೇರಿದವರು. ಆಟಗಾರ್ತಿಯರು ಶಾರ್ಟ್ಸ್ ಬದಲಾಗಿ ಕಾಲನ್ನು ಮುಚ್ಚುವ ಲೆಗ್ಗಿಂಗ್ಸ್ ಏಕೆ ಹಾಕಿಕೊಳ್ಳಲಿಲ್ಲ" ಎಂದು ಕೇಳಿದ್ದಾರೆ.
ಪತ್ರಕರ್ತನ ಈ ಪ್ರಶ್ನೆಗೆ ತಂಡದ ಕೋಚ್ ಕೆಲ ಹೊತ್ತು ಆಶ್ಚರ್ಯಚಕಿತರಾಗಿ ಬಳಿಕ, "ಕ್ರೀಡೆಯಲ್ಲಿ ಎಲ್ಲರೂ ಪ್ರತಿಪರರಾಗಬೇಕು" ಎಂದಷ್ಟೇ ಉತ್ತರಿಸಿದರು. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಪಾಕಿಸ್ತಾನ ಪತ್ರಕರ್ತನ ಸಂಕುಚಿತ ಮಾನಸಿಕತೆಯನ್ನು ಟೀಕಿಸಲಾಗಿದೆ. ಬಟ್ಟೆ ವಿಚಾರಕ್ಕೆ ಬಂದರೆ ನಾವು ಯಾರನ್ನೂ ತಡೆಯೋ ಪ್ರಯತ್ನ ಮಾಡಲ್ಲ. ನಿಯಂತ್ರಿಸುವ ಪ್ರಶ್ನೆಯೇ ಇಲ್ಲ ಎಂಬ ಕಮೆಂಟ್ಗಳು ಬಂದಿವೆ.
ಪಾಕ್ನಲ್ಲಿ ಬೆಂಬಲ: ಪಾಕಿಸ್ತಾನದ ಟಿವಿಯೊಂದರ ನಿರೂಪಕಿ ಮತ್ತು ಆರ್‌ಜೆ ಅನುಶಿ ಅಶ್ರಫ್, ಸ್ಕ್ವಾಷ್ ಆಟಗಾರ್ತಿ ನೂರೇನಾ ಶಾಮ್ಸ್ ಸೇರಿದಂತೆ ಹಲವರು ಮಹಿಳಾ ಫುಟ್ಬಾಲ್ ತಂಡದ ಬೆಂಬಲಕ್ಕೆ ನಿಂತಿದ್ದಾರೆ. ವರದಿಗಾರನ ಸಂಕುಚಿತ ಮನೋಭಾವಕ್ಕೆ ಛೀಮಾರಿ ಹಾಕಿದ್ದಾರೆ. ಇಂತಹ ವ್ಯಕ್ತಿಗಳು ಶಾರ್ಟ್ಸ್‌ನಲ್ಲಿ ಆಟಗಾರ್ತಿಯರನ್ನು ನೋಡಲು ಸಮಸ್ಯೆಯಿದ್ದರೆ ಕ್ರೀಡೆಯನ್ನು ವರದಿ ಮಾಡಲು ಅಲ್ಲಿಗೆ ಬರಬಾರದು ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು, ಪಂದ್ಯದಲ್ಲಿ ಪಾಕಿಸ್ತಾನ ತಂಡ ಮಾಲ್ಡೀವ್ಸ್ ವಿರುದ್ಧ 7-0 ಅಂತರದಲ್ಲಿ ಜಯ ದಾಖಲಿಸಿದರೆ, ಆಟಗಾರ್ತಿ ನಾಡಿಯಾ ಖಾನ್ 4 ಗೋಲು ಗಳಿಸಿ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಾಯಿಂಟ್ ಪಟ್ಟಿಯಲ್ಲಿ ಭಾರತ 3 ಪಂದ್ಯದಲ್ಲಿ 2 ಜಯಿಸಿ 2ನೇ ಸ್ಥಾನದಲ್ಲಿದೆ. ಪಾಕಿಸ್ತಾನ 3ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಮಹಿಳೆಯರು ಟಾಪ್ನಲ್ಲಿದ್ದಾರೆ.
ಓದಿ: ವಿರಾಟ್ ಕೊಹ್ಲಿಯ ಸ್ಟೈಲಿಶ್ ಹೇರ್ಸ್ಟೈಲ್ಗೆ ಅಭಿಮಾನಿಗಳು ಫಿದಾ.. ನೀವೂ ನೋಡಿ