ಸಾಧನೆಗೆ ವಯಸ್ಸಿನ ಹಂಗೇತಕೆ?. ಸಾಧಿಸುವ ಛಲ ಇರಬೇಕು ಅಷ್ಟೇ. ಅಂತಹವರಲ್ಲಿ ಒಬ್ಬರು ನಾಗಜ್ಯೋತಿ. ಓಡಲು ಸರಿಯಾದ ಮೈದಾನ ಇಲ್ಲ, ವೈಟ್ ಲಿಫ್ಟ್ಗೆ ಯಾವುದೇ ಜಿಮ್ ಇಲ್ಲ. ಹೀಗಿದ್ದರೂ ನೇಪಾಳದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಾಲ್ಕು ಮೆಡಲ್‌ಗಳಿಗೆ ಇವರು ಕೊರಳೊಡ್ಡಿದ್ದಾರೆ.
ಮಗುವಾದ ಮೇಲೂ ಸಾಧನೆ ಮಾಡುವುದು ಸಣ್ಣ ವಿಷಯವಲ್ಲ. ಅದೂ ಕೂಡಾ 40ರ ವಯಸ್ಸಿನಲ್ಲಿ. ಅದರಲ್ಲೂ ಹೆಣ್ಣು ಮಗುವಿನ ತಾಯಿಯಾಗಿ ಈ ರೀತಿಯ ಸಾಧನೆ ಸವಾಲೇ ಸರಿ. ಇದೇ ರೀತಿ ನಾಗಜ್ಯೋತಿ ಅವರಿಗೂ ಹಲವು ಪ್ರಶ್ನೆಗಳು ಕಾಡಿದವು. ಅವನ್ನೆಲ್ಲವನ್ನೂ ಎದುರಿಸಿ ಇದೀಗ ಸ್ಪರ್ಧೆಯಲ್ಲಿ ಸಾಧಿಸಿ ಮಾದರಿಯಾಗಿದ್ದಾರೆ.
"ಸ್ಪರ್ಧೆಯಲ್ಲಿ ಭಾಗಿಯಾಗುವಾಗ ಅನೇಕ ಪ್ರಶ್ನೆಗಳನ್ನು ನಾನು ಎದುರಿಸಿದೆ. ನನ್ನಿಂದ ಸಾಧಿಸಲು ಸಾಧ್ಯವಿದೆ ಎಂಬ ಮನೋಬಲ ಇದ್ದಾಗ ಯಶಸ್ಸು ಸಾಧ್ಯವಾಗುತ್ತದೆ. ಇದೀಗ ನನ್ನನ್ನು ಟೀಕಿಸಿದವರಿಗೆಲ್ಲ ಗೆಲುವಿನ ಮೂಲಕ ಉತ್ತರಿಸಿದ್ದೇನೆ" ಎನ್ನುತ್ತಾರೆ ನಾಗಜ್ಯೋತಿ.
"ನಮ್ಮ ಊರು ಅನಕಪಲ್ಲಿ. ಬಾಲ್ಯದಿಂದಲೂ ಕ್ರೀಡೆ ಎಂದರೆ ನನಗಿಷ್ಟ. ಹೈಸ್ಕೂಲ್ಗೆ ಬಂದಾಗ ನಾನು ಓಟ, ಜವಲಿನ್ ಥ್ರೋ, ಡಿಸ್ಕಸ್ ಥ್ರೋನಂತಹ ಹಲವು ಕ್ರೀಡೆಯಲ್ಲಿ ಭಾಗಿಯಾಗಿ ಅನೇಕ ಮೆಡಲ್‌ಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪಡೆದೆ. ಕ್ರೀಡಾ ಮೀಸಲಾತಿಯಲ್ಲಿ ಟೀಚರ್ ಟ್ರೈನಿಂಗ್ ಸೆಂಟರ್‌ನಲ್ಲಿ ಸೀಟು ಪಡೆದು ತರಬೇತಿ ಮುಗಿಸಿದೆ. ಸೆಕೆಂಡ್ ಗ್ರೇಡ್ ಇಂಗ್ಲಿಷ್ ಟೀಚರ್ ಆಗಿ ಕೆಲಸ ಪಡೆದೆ. ಈ ಉದ್ಯೋಗದ ಬಳಿಕ ಮದುವೆಯಾಯಿತು. ನಂತರ ಬಿಎಡ್ ಮತ್ತು ಎಂಎಡ್ ಮುಗಿಸಿದೆ. ನಂತರ ಮಕ್ಕಳ ಪೋಷಣೆ ಹಿನ್ನೆಲೆಯಲ್ಲಿ ಕ್ರೀಡೆಯಿಂದ ಬ್ರೇಕ್ ಪಡೆದೆ. ಆದರೆ, ಕೋವಿಡ್ ಸಮಯ ಮತ್ತೆ ಕ್ರೀಡೆಯತ್ತ ನನ್ನ ಗಮನ ಹರಿಸುವಂತೆ ಮಾಡಿತು. ಆ ಸಮಯದಲ್ಲಿ ಶಾಲೆಗೆ ಹೋಗುವ ಅವಶ್ಯಕತೆ ಇರಲಿಲ್ಲ. ಮಗಳು ಸಾಹಿತ್ಯ ಕೂಡ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಮೆಡಲ್ ಪಡೆದಿದ್ದಳು. ಇದೇ ಸಮಯದಲ್ಲಿ ಕೋಚ್ ನನಗೆ ಪವರ್ ಲಿಫ್ಟಿಂಗ್ ಉತ್ತಮ ಆಯ್ಕೆ ಎಂದು ಸಲಹೆ ನೀಡಿದರು. ಈ ಮಾರ್ಗದಲ್ಲಿ ಹೆಜ್ಜೆ ಹಾಕಿದೆ" ಎಂದು ತಮ್ಮ ಪ್ರಯಾಣವನ್ನು ಮೆಲುಕು ಹಾಕಿದ್ದಾರೆ.
"ಪ್ರಸ್ತುತ ನಾನು ಕೊಟ್ಟಕೊಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಗ್ರಾಮದಲ್ಲಿ ಕ್ರೀಡಾ ತರಬೇತಿಗೆ ಯಾವುದೇ ಸೌಲಭ್ಯವಿಲ್ಲ. ಇದಕ್ಕಾಗಿ ವಾರದಲ್ಲಿ ಎರಡು ದಿನ ಬೆಳಿಗ್ಗೆ 4.30ಕ್ಕೆ ಎದ್ದು ಓಡುತ್ತಿದ್ದೆ. 50 ಕಿ.ಮೀ ದೂರದ ಅನಕಪಲ್ಲಿಗೆ ಓಡಿ, ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದೆ. ಈ ನನ್ನೆಲ್ಲಾ ಕಠಿಣ ಶ್ರಮ ವ್ಯರ್ಥವಾಗಲಿಲ್ಲ. ಕಳೆದ ವರ್ಷ ರಾಜ್ಯ ಮಟ್ಟದ ಸರ್ಕಾರಿ ಉದ್ಯೋಗಿಗಳ ಸ್ಪರ್ಧೆಯಲ್ಲಿ ಪವರ್ಲಿಫ್ಟಿಂಗ್ನಲ್ಲಿ ಗೋಲ್ಡ್ ಮೆಡಲ್ ಪಡೆದೆ. ಇದೇ ಉತ್ಸಾಹದಲ್ಲಿ ನೇಪಾಳದಲ್ಲಿ ಈ ವರ್ಷ ನಡೆದ ಯುನೈಟೆಡ್ ಇಂಡಿಯಾ ಖೇಲ್ ಫೌಂಡೇಷನ್ನಲ್ಲಿ ಭಾಗಿಯಾದೆ. 12 ದೇಶಗಳ ಅಥ್ಲೀಟ್ಗಳ ಜೊತೆ ಸ್ಪರ್ಧಿಸಿ ಚಿನ್ನ ಮತ್ತು ಬೆಳ್ಳಿ ಪದಕವನ್ನು ಅಥ್ಲೆಟಿಕ್ಸ್ ಮತ್ತು ಪವರ್ ಲಿಫ್ಟಿಂಗ್‌ನಲ್ಲಿ ಪಡೆದೆ. ಅಲ್ಲದೆ ಮುಂದಿನ ವರ್ಷ ಅಮೆರಿಕದಲ್ಲಿ ನಡೆಯುವ ವರ್ಲ್ಡ್ ಮಾಸ್ಟರ್ ಗೇಮ್ಸ್ಗೆ ಆಯ್ಕೆಯಾಗಿದ್ದೇನೆ. ಇದಕ್ಕೆ 8 ಲಕ್ಷ ರೂ ಖರ್ಚಾಗುತ್ತದೆ. ಇದಕ್ಕಾಗಿ ನಾನು ದಾನಿಗಳನ್ನು ಎದುರು ನೋಡುತ್ತಿದ್ದೇನೆ. ನರಸಿಪಟ್ನಂನಲ್ಲಿ ನಿನ್ಜಸ್ ಅಕಾಡೆಮಿಯನ್ನು ಸ್ನೇಹಿತರ ಸಹಾಯದಿಂದ ಸ್ಥಾಪಿಸಿದ್ದು, ಬಡ ಕ್ರೀಡಾ ಆಸಕ್ತಿ ಹೊಂದಿರುವ ಅಥ್ಲೀಟ್ಗಳಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದೇನೆ. ಇಲ್ಲಿ ಉಚಿತವಾಗಿ ಮಾರ್ಷಲ್ ಆರ್ಟ್ಸ್, ಕರಾಟೆ ಮತ್ತು ಬಾಕ್ಸಿಂಗ್ ಹೇಳಿಕೊಡಲಾಗುತ್ತಿದೆ" ಎಂದರು.
ಇದನ್ನೂ ಓದಿ: ಪ್ಯಾರಾ ಏಷ್ಯನ್ ಗೇಮ್ಸ್: 5ನೇ ದಿನ ಭಾರತಕ್ಕೆ ಸ್ವರ್ಣ ಪದಕಗಳ ಸುರಿಮಳೆ... ಪದಕಗಳ ಶತಕಕ್ಕೆ ಇನ್ನಷ್ಟು ಹತ್ತಿರ