ವಿಂಬಲ್ಡನ್: 22 ಬಾರಿ ಟೆನಿಸ್ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ಸ್ಪ್ಯಾನಿಷ್ ಸ್ಟಾರ್ ಆಟಗಾರ ರಾಫೆಲ್ ನಡಾಲ್ ವಿಂಬಲ್ಡನ್ ಸೆಮಿಫೈನಲ್‌ನಿಂದ ಹಿಂದೆ ಸರಿದಿದ್ದಾರೆ. ಇಂದು ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ಎದುರು ಅವರು ಸೆಮಿಫೈನಲ್ ಆಡಬೇಕಿತ್ತು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿರುವ ಅವರು ಸೆಮಿಫೈನಲ್‌ನಿಂದ ಹಿಂದೆ ಸರಿದ ನಂತರ ಕಿರ್ಗಿಯೋಸ್ ವಾಕ್‌ಓವರ್‌ನೊಂದಿಗೆ ಫೈನಲ್ ತಲುಪಿದ್ದಾರೆ.
ಈ ವರ್ಷ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ನಡಾಲ್ ಕ್ಯಾಲೆಂಡರ್ ಗ್ರ್ಯಾಂಡ್ ಸ್ಲ್ಯಾಮ್ ಪೂರ್ಣಗೊಳಿಸಲಿಲ್ಲ. ಕ್ವಾರ್ಟರ್ ಫೈನಲ್‌ನಲ್ಲಿ 11ನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಅವರನ್ನು ಸೋಲಿಸಿರುವ ನಡಾಲ್, ಈ ಮೂಲಕ ವಿಂಬಲ್ಡನ್ ಸೆಮಿಫೈನಲ್ ತಲುಪಿದ್ದರು. ಈ ಪಂದ್ಯದ ಸಂದರ್ಭದಲ್ಲಿ ಅವರಿಗೆ ಹೊಟ್ಟೆ ನೋವು ಬಾಧಿಸಿದೆ. ಆದರೂ ಛಲ ಬಿಡದೆ 4 ಗಂಟೆ 21 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 3-6, 7-5, 3-6, 7-5, 7-6 ಅಂತರದಲ್ಲಿ ಜಯ ದಾಖಲಿಸಿದ್ದರು.
ಇದನ್ನೂ ಓದಿ: ವಿಂಬಲ್ಡನ್: ಹೊಟ್ಟೆನೋವಿನ ಮಧ್ಯೆಯೂ ಹೋರಾಡಿ ಸೆಮಿಫೈನಲ್ ತಲುಪಿದ ನಡಾಲ್
ಪಂದ್ಯದ ಸಮಯದಲ್ಲಿ ಪುತ್ರ ಅನುಭವಿಸುತ್ತಿದ್ದ ಹೊಟ್ಟೆನೋವು ಅರಿತ ತಂದೆ ಆಟದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದರು. ಆದ್ರೆ ನಡಾಲ್ ಛಲ ಬಿಡದೆ ಆಟ ಮುಂದುವರಿಸಿ ಪಂದ್ಯ ಗೆದ್ದು ಹೊರ ಬಂದಿದ್ದರು. ನಡಾಲ್ ತಮ್ಮ ವೃತ್ತಿಜೀವನದಲ್ಲಿ 8ನೇ ಬಾರಿಗೆ ವಿಂಬಲ್ಡನ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ.