ನವದೆಹಲಿ : ಕುಸ್ತಿಪಟು ಭಜರಂಗ್ ಪುನಿಯಾ ಅವರಿಗೆ ಅಮೆರಿಕದಲ್ಲಿ ಒಂದು ತಿಂಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ನೀಡಲಾಗಿದೆ.
ನವೆಂಬರ್ 26 ರಂದು ನಡೆದ 50ನೇ ಮಿಷನ್ ಒಲಿಂಪಿಕ್ ಸೆಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಶಿಬಿರವು ಡಿಸೆಂಬರ್ 4 ರಿಂದ ಜನವರಿ 3ರವರೆಗೆ ಅಮೆರಿಕದ ಮಿಚಿಗನ್‌ನ ಕ್ಲಿಫ್ ಕೀನ್ ವ್ರೆಸ್ಲಿಂಗ್ ಕ್ಲಬ್‌ನಲ್ಲಿ ನಡೆಯಲಿದ್ದು, ಅಂದಾಜು 14 ಲಕ್ಷ ರೂಪಾಯಿ ಇದಕ್ಕಾಗಿ ಖರ್ಚಾಗಲಿದೆ.
ಕೊರೊನಾ ವೈರಸ್ ಲಾಕ್‌ಡೌನ್ ನಂತರದ ತರಬೇತಿ ಶಿಬಿರಗಳನ್ನು ಪುನಾರಂಭಿಸಿದ್ದು,ಎಸ್‌ಎಐ ಸೋನೆಪತ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಭಜರಂಗ್ ಪುನಿಯಾ, ತನ್ನ ತರಬೇತುದಾರ ಎಮ್ಜಾರಿಯೊಸ್ ಬೆಂಟಿನಿಡಿಸ್ ಮತ್ತು ಫಿಸಿಯೋ ಧನಂಜಯ್ ಅವರೊಂದಿಗೆ ಯುಎಸ್ಎಗೆ ಪ್ರಯಾಣ ಬೆಳೆಸಲಿದ್ದಾರೆ.
ತರಬೇತಿ ಶಿಬಿರದಲ್ಲಿ, ಅವರು ಮುಖ್ಯ ತರಬೇತುದಾರ, ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಸೆರ್ಗೆಯ್ ಬೆಲೊಗ್ಲಾಜೊವ್ ಅವರ ನೇತೃತ್ವದ ಅಂತಾರಾಷ್ಟ್ರೀಯ ಕುಸ್ತಿಪಟುಗಳೊಂದಿಗೆ ತರಬೇತಿ ಪಡೆಯಲಿದ್ದಾರೆ. ಭಜರಂಗ್ ಪೂನಿಯಾ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.