ನವದೆಹಲಿ: ಹಲವು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ವಿಜೇತ ಭಾರತೀಯ ಟೆನ್ನಿಸಿಗ ಲಿಯಾಂಡರ್ ಪೇಸ್ ಆಟಗಾರರ ವಿಭಾಗದಲ್ಲಿ ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್‌ಗೆ (ಐಟಿಹೆಚ್ಎಫ್) ನಾಮನಿರ್ದೇಶನಗೊಂಡ ಏಷ್ಯಾದ ಮೊದಲ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 50 ವರ್ಷದ ಪೇಸ್ 2024 ರ ಆವೃತ್ತಿಗೆ ಘೋಷಿಸಲಾದ ಆರು ನಾಮನಿರ್ದೇಶಿತರಲ್ಲಿ ಒಬ್ಬರು. ಪೇಸ್ ಇದೀಗ ಆಟಗಾರರ ವಿಭಾಗದಲ್ಲಿ ಕಾರಾ ಬ್ಲ್ಯಾಕ್, ಅನಾ ಇವನೊವಿಕ್, ಕಾರ್ಲೋಸ್ ಮೋಯಾ, ಡೇನಿಯಲ್ ನೆಸ್ಟರ್ ಮತ್ತು ಫ್ಲಾವಿಯಾ ಪೆನ್ನೆಟ್ಟಾ ಅವರೊಂದಿಗೆ ಸ್ಪರ್ಧಿಸಲಿದ್ದಾರೆ. ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್‌ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಚೀನಾದ ಆಟಗಾರ್ತಿ ಲಿ ನಾ, 2019 ರಲ್ಲಿ ITHFಗೆ ನಾಮನಿರ್ದೇಶನಗೊಂಡ ಮೊದಲ ಏಷ್ಯನ್ ಆಟಗಾರ್ತಿಯಾಗಿದ್ದಾರೆ.
ಕಠಿಣ ಪರಿಶ್ರಮ ಗುರುತಿಸಿದ್ದಾರೆ, ರೋಮಾಂಚಕ ಅನುಭವ- ಪೇಸ್: ''ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್‌ಗೆ ಆಟಗಾರರ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಮೊದಲ ಏಷ್ಯನ್ ವ್ಯಕ್ತಿ ನಾನು ಎಂಬುದೇ ನನಗೆ ಜಗತ್ತು ಆಗಿದೆ'' ಎಂದು ಪೇಸ್ ಹರ್ಷ ವ್ಯಕ್ತಪಡಿಸಿದ್ದಾರೆ. "ಮೂರು ದಶಕಗಳ ಟೆನ್ನಿಸ್ ಉತ್ಸಾಹ, ಒಲಿಂಪಿಕ್ಸ್, ಡೇವಿಸ್ ಕಪ್‌ನಲ್ಲಿ ಕೋಟ್ಯಂತರ ಭಾರತೀಯರಿಗಾಗಿ ಆಡಿದ ನಂತರ ಇದೀಗ ನನ್ನ ಕಠಿಣ ಪರಿಶ್ರಮವನ್ನು ಗುರುತಿಸಿದ್ದು, ರೋಮಾಂಚನಗೊಂಡಿದ್ದೇನೆ. ನನ್ನ ಪೋಷಕರು, ಒಡಹುಟ್ಟಿದವರು, ತರಬೇತುದಾರರು, ಡೇವಿಸ್ ಕಪ್ ನಾಯಕರು ಮತ್ತು ನನ್ನ ವೃತ್ತಿಜೀವನದಲ್ಲಿ ಪಾತ್ರವಹಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಅವರು ಹೇಳಿದರು.
ವಿಜಯ್ ಅಮೃತರಾಜ್ ನಾಮನಿರ್ದೇಶನ: ಭಾರತದ ಮಾಜಿ ಟೆನ್ನಿಸ್ ಆಟಗಾರ ವಿಜಯ್ ಅಮೃತರಾಜ್ ಕೂಡ ಕೊಡುಗೆದಾರರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. "ಮತದಾನದ ಮೂಲಕ ಕೊಡುಗೆದಾರರ ವರ್ಗದಲ್ಲಿ ಇಬ್ಬರ ಹೆಸರನ್ನು ನಾಮನಿರ್ದೇಶನ ಮಾಡಲಾಗುತ್ತದೆ. ವಿಜಯ್ ಅಮೃತರಾಜ್ ಮತ್ತು ಖ್ಯಾತ ಪತ್ರಕರ್ತ ರಿಚರ್ಡ್ ಇವಾನ್ಸ್ ಆಯ್ಕೆಯಾಗಿದ್ದಾರೆ" ಎಂದು ಐಟಿಹೆಚ್ಎಫ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಪೇಸ್ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ 18 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಾಜಿ ಡಬಲ್ಸ್ ಆಟಗಾರರಲ್ಲಿ ವಿಶ್ವದ ನಂ. 1 ಸ್ಥಾನ ಪಡೆದಿದ್ದಾರೆ. ಮೂರು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಡಬಲ್ಸ್‌ನಲ್ಲಿ 8 ಗ್ರ್ಯಾಂಡ್ ಸ್ಲಾಮ್‌ಗಳನ್ನು, ಮಿಶ್ರ ಡಬಲ್ಸ್‌ನಲ್ಲಿ 10 ಹಾಗೂ ಎರಡೂ ವಿಭಾಗಗಳಲ್ಲಿ ವೃತ್ತಿಜೀವನದ ಸ್ಲಾಮ್‌ಗಳನ್ನು ತನ್ನದಾಗಿಸಿಕೊಂಡಿದ್ದಾರೆ. "ಟೆನಿಸ್ ನನಗೆ ಎಲ್ಲವನ್ನೂ ನೀಡಿದೆ. ಈ ನಾಮನಿರ್ದೇಶನವು ಪ್ರಪಂಚದಾದ್ಯಂತದ ಪ್ರತಿ ಚಿಕ್ಕ ಮಗುವಿಗೆ ಸ್ಫೂರ್ತಿ ನೀಡುತ್ತದೆ ಎಂದು ಭಾವಿಸುತ್ತೇನೆ. ನಿಮ್ಮ ಹೃದಯದಲ್ಲಿ ಉತ್ಸಾಹ, ಕಠಿಣ ಪರಿಶ್ರಮ ಮತ್ತು ನಿಮ್ಮಲ್ಲಿ ನಂಬಿಕೆ ಇದ್ದರೆ, ನೀವು ಸಹ ಚಾಂಪಿಯನ್ ಆಗಬಹುದು" ಎಂದು ಪೇಸ್ ಹೇಳಿದರು.
55 ಡಬಲ್ಸ್ ಪ್ರಶಸ್ತಿ ಗೆದ್ದಿರುವ ಪೇಸ್: ಪೇಸ್ ATP ಡಬಲ್ಸ್ ಅಗ್ರ 10 ರಲ್ಲಿ ಪೇಸ್ ಒಟ್ಟು 462 ವಾರಗಳನ್ನು ಕಳೆದಿದ್ದಾರೆ. ಇದರಲ್ಲಿ 37 ವಾರಗಳ ಅವಧಿಯಲ್ಲಿ ನಂ.1 ಸ್ಥಾನದಲ್ಲಿದ್ದರು. ಇದರ ಜೊತೆಗೆ 55 ಡಬಲ್ಸ್ ಪ್ರಶಸ್ತಿಗಳನ್ನೂ ಗೆದ್ದರು. 30 ವರ್ಷಗಳ ಕಾಲ ಭಾರತಕ್ಕೆ ಡೇವಿಸ್ ಕಪ್ ಆಧಾರಸ್ತಂಭವಾಗಿದೆ. ಪೇಸ್ 43 ಡಬಲ್ಸ್ ಟೈ ಗೆಲುವುಗಳೊಂದಿಗೆ ಸ್ಪರ್ಧೆಯ ದಾಖಲೆಯನ್ನು ಗಳಿಸಿದ್ದಾರೆ. 1996 ರಲ್ಲಿ, ಅಟ್ಲಾಂಟಾ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗಳಿಸುವ ಮೂಲಕ ಟೆನಿಸ್‌ನಲ್ಲಿ ಭಾರತದ ಏಕೈಕ ಒಲಿಂಪಿಕ್ ಪದಕ ವಿಜೇತ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.
ಇದನ್ನೂ ಓದಿ: "ಹಾರ್ದಿಕ್ ಸೇರಿದಂತೆ ಮೂವರು ಪ್ರಮುಖ ಬೌಲರ್ಗಳು ತಂಡದಲ್ಲಿ ಆಡುವುದು ಸೂಕ್ತ": ಅಂಶುಮಾನ್ ಗಾಯಕ್ವಾಡ್