ಬೆಂಗಳೂರು: ಅರ್ಜುನ್ ದೇಶ್ವಾಲ್ ಅವರ ಅಮೋಘ ಆಟದ ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸಿದೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲಾರ್ಧದ ಅಂತ್ಯಕ್ಕೆ 12-20 ಅಂಕಗಳಿಂದ ಹಿನ್ನಡೆ ಅನುಭವಿಸಿದ್ದ ಪಿಂಕ್ ಪ್ಯಾಂಥರ್ಸ್ ದ್ವಿತೀಯಾರ್ಧದಲ್ಲಿ 35-32 ಅಂಕಗಳಿಂದ ಜಯ ಸಾಧಿಸಿತು. ಪಂದ್ಯದಲ್ಲಿ 15 ಅಂಕಗಳನ್ನು ಗಳಿಸಿದ ದೇಶ್ವಾಲ್, ಪಿಕೆಎಲ್ ನಲ್ಲಿ 700ನೇ ರೈಡ್ ಪಾಯಿಂಟ್ಸ್ ದಾಖಲಿಸಿದರು.
ಪಂದ್ಯದ ಆರಂಭದ ನಿಮಿಷಗಳಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದವು. ಆದಾಗ್ಯೂ, ಸೋನು ಸೂಪರ್ ರೈಡ್ ಮೂಲಕ ಜೈಂಟ್ಸ್ ತಂಡಕ್ಕೆ 8-5ರಲ್ಲಿ ಮುನ್ನಡೆ ಸಾಧಿಸಲು ಸಹಾಯ ಮಾಡಿದರು. 10ನೇ ನಿಮಿಷದಲ್ಲಿ ಜೈಪುರವನ್ನ ಆಲೌಟ್ ಮಾಡಿದ ಜೈಂಟ್ಸ್ ತಂಡ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಿಕೊಂಡಿತು. ಸೋನು ರೈಡ್ ಪಾಯಿಂಟ್ ಪಡೆದರೆ, ಫಜಲ್ ಅತ್ರಾಚಲಿ ಜೈಪುರದ ವಿ. ಅಜಿತ್ ಕುಮಾರ್ ಅವರನ್ನು ಟ್ಯಾಕಲ್ ಮಾಡಿದರು. 18ನೇ ನಿಮಿಷದಲ್ಲಿ ಜೈಂಟ್ಸ್ 18-10 ಅಂಕಗಳ ಮುನ್ನಡೆ ಸಾಧಿಸಿದ್ದರಿಂದ ಜೈಪುರ ರಕ್ಷಣಾತ್ಮಕ ಆಟದ ಮೊರೆ ಹೋಯಿತಾದರೂ ಸೋನು ಅವರ ಅಮೋಘ ಆಟವು ಮೊದಲಾರ್ಧದಲ್ಲಿ ಗುಜರಾತ್ 20-12ರಲ್ಲಿ ಮೇಲುಗೈ ಸಾಧಿಸಲು ನೆರವಾಯಿತು.
ದ್ವಿತೀಯಾರ್ಧದ ಆರಂಭಿಕ ನಿಮಿಷಗಳಲ್ಲಿ ಪ್ಯಾಂಥರ್ಸ್ ಜೈಂಟ್ಸ್ ತಂಡದ ರೋಹಿತ್ ಗುಲಿಯಾ ಅವರನ್ನು ಟ್ಯಾಕಲ್ ಮಾಡಿತು. ಆದರೂ ಜೈಂಟ್ಸ್ ಇನ್ನೂ 20-14 ರಲ್ಲಿ ಉತ್ತಮ ಮುನ್ನಡೆಯನ್ನು ಕಾಯ್ದುಕೊಂಡಿತ್ತು. 27ನೇ ನಿಮಿಷದಲ್ಲಿ ಅರ್ಜುನ್ ದೇಶ್ವಾಲ್ ನಾಲ್ಕೈದು ಬಾರಿ ರೈಡ್ ಪಾಯಿಂಟ್ ಗಳಿಸಿ ಅಂತರವನ್ನು ಕಡಿಮೆ ಮಾಡಿದರು. ಇದಾದ ಕೆಲವೇ ಕ್ಷಣಗಳಲ್ಲಿ ಸೂಪರ್ ರೈಡ್ ಮಾಡಿದ ದೇಶ್ವಾಲ್ ಜೈಂಟ್ಸ್ ಮ್ಯಾಟ್ ಮೇಲೆ ಜೈಂಟ್ಸ್ ತಂಡದ ಸದಸ್ಯರ ಸಂಖ್ಯೆಯನ್ನು ಒಂದಕ್ಕಿಳಿಸಿದರು. 31ನೇ ನಿಮಿಷದಲ್ಲಿ ವಿಕಾಸ್ ಜಗ್ಲಾನ್ ಗಳಿಸಿದ ಅಂಕದಿಂದ ಪ್ಯಾಂಥರ್ಸ್ 26-25 ಅಂಕಗಳ ಮುನ್ನಡೆ ಸಾಧಿಸಿತು.
ದೇಶ್ವಾಲ್ ಮತ್ತೊಂದು ಅದ್ಭುತ ರೈಡ್ ಮೂಲಕ ಪಿಕೆಎಲ್‌ನಲ್ಲಿ ತಮ್ಮ 700ನೇ ರೈಡ್ ಪಾಯಿಂಟ್ ದಾಖಲಿಸಿದರು. ನಂತರ ಜೈಂಟ್ಸ್ ಪರ ಸೋನು ರೈಡ್ ಪಾಯಿಂಟ್ ಗಳಿಸಿದರೆ, 37ನೇ ನಿಮಿಷದಲ್ಲಿ ಜೈಂಟ್ಸ್ ತಂಡ ದೇಶ್ವಾಲ್ ಅವರನ್ನು ಟ್ಯಾಕಲ್ ಮಾಡಿತು. ನಂತರ ಜೈಪುರದ ತಂಡವು ರಾಕೇಶ್ ಅವರನ್ನು ಟ್ಯಾಕಲ್ ಮಾಡಿ 31-29 ರಲ್ಲಿ ಅಲ್ಪ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಪಂದ್ಯದ ಕೊನೆಯ ನಿಮಿಷಗಳಲ್ಲಿ ಭವಾನಿ ರಜಪೂತ್ ಸೂಪರ್ ರೈಡ್ ಮೂಲಕ ಪ್ಯಾಂಥರ್ಸ್ ಗೆ ಗೆಲುವು ತಂದಿತ್ತರು.
ಇಂದಿನ ಪಂದ್ಯ: ಬೆಂಗಾಲ್ ವಾರಿಯರ್ಸ್ V/s ಪಾಟ್ನಾ ಪೈರೇಟ್ಸ್ - ರಾತ್ರಿ 8 ಗಂಟೆಗೆ
ಇದನ್ನೂ ಓದಿ: ಟಿ20 ವಿಶ್ವಕಪ್ ತಯಾರಿಗೆ ಮಳೆ ಆತಂಕ: ಹರಿಣಗಳ ವಿರುದ್ಧ ನಡೆಯುತ್ತಾ ಎರಡನೇ ಪಂದ್ಯ?