ನವದೆಹಲಿ: ಮೈನವಿರೇಳಿಸುವ ಬೈಕ್ ಸ್ಪರ್ಧೆಯಾದ ಮೋಟೋ ಜಿಪಿ ಮುಂದಿನ ವರ್ಷ ಭಾರತದಲ್ಲಿ ನಡೆಯಲಿದೆ. 2023 ರಲ್ಲಿ 'ಗ್ರ್ಯಾಂಡ್ ಪ್ರಿಕ್ಸ್ ಆಫ್ ಭಾರತ್' ಹೆಸರಿನಲ್ಲಿ ಚೊಚ್ಚಲ ಮೋಟೋ ಜಿಪಿ ವರ್ಲ್ಡ್ ಕಪ್ ಚಾಂಪಿಯನ್‌ಶಿಪ್ ರೇಸ್ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಆಯೋಜಿಸಲಾಗಿದೆ.
ಈ ಹಿಂದೆ ಬುದ್ಧ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್ ಅಂತಾರಾಷ್ಟ್ರೀಯ ಸ್ಪರ್ಧೆಯಾದ ಫಾರ್ಮುಲಾ 1 ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಆಯೋಜಿಸಿತ್ತು. ಇದು 2011 ರಿಂದ 2013 ರವರೆಗೆ ಸತತ ಮೂರು ವರ್ಷಗಳ ಕಾಲ ನಡೆದಿತ್ತು. ಇದೀಗ ಅಂತದ್ದೇ ರೋಮಾಂಚನಕಾರಿ ಸ್ಪರ್ಧೆಯಾದ ಮೋಟೋ ಜಿಪಿ ಬೈಕ್ ಕೂಟ ನಡೆಯಲಿದೆ.
ಮೋಟೋ ಜಿಪಿಯ ವಾಣಿಜ್ಯ ಹಕ್ಕುದಾರರಾದ ಕಾರ್ಲೋಸ್ ಎಜ್ಪೆಲೆಟಾ ಈ ಬಗ್ಗೆ ಮಾಹಿತಿ ನೀಡಿ, ಭಾರತದಲ್ಲಿ ಮೋಟೋ ಜಿಪಿಯ ಅಭಿಮಾನಿಗಳಿದ್ದಾರೆ. ಹೀಗಾಗಿ ಮುಂದಿನ ವರ್ಷ ರೋಮಾಂಚನಕಾರಿ ಬೈಕ್ ಸ್ಪರ್ಧೆಯನ್ನು ಇಲ್ಲಿ ನಡೆಸಲು ಉದ್ದೇಶಿಸಿದ್ದೇವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇದಕ್ಕೆ ಸಮ್ಮತಿಸಿದ್ದು, ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ಉತ್ತರಪ್ರದೇಶದಲ್ಲಿ ಈ ಲೀಗ್ ನಡೆಯುವುದರಿಂದ 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಪ್ರವಾಸೋದ್ಯಮವೂ ಬೆಳೆಯುತ್ತದೆ. ವಿವಿಧ ರಾಜ್ಯಗಳಿಂದ ಬೈಕ್ ಸ್ಪರ್ಧೆ ನೋಡಲು ಅಭಿಮಾನಿಗಳು ಆಗಮಿಸಲಿದ್ದಾರೆ. ಈ ದೊಡ್ಡ ಸ್ಪರ್ಧೆಯಲ್ಲಿ 19 ದೇಶಗಳ ವಿವಿಧ ರೈಡರ್‌ಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಓದಿ: ಮಿಥಾಲಿ ರಾಜ್ ದಾಖಲೆ ಉಡೀಸ್, ವಿರಾಟ್ ಕೊಹ್ಲಿ ಸಾಲಿಗೆ ಸ್ಮೃತಿ ಮಂಧಾನಾ..ಏನದು ಗೊತ್ತಾ?